ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾಗೌಡ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದ ಪ್ರಕರಣದ ಪ್ರಮುಖ ಆರೋಪಿ ರಾಜೀವ್ ಗೌಡನನ್ನು ಇಂದು (ಜನವರಿ 26) ಕೇರಳ ಗಡಿಭಾಗದಲ್ಲಿ ಬಂಧಿಸಲಾಗಿದೆ. ಜನವರಿ 12ರಂದು ಕಲ್ಟ್ ಸಿನಿಮಾ ಬ್ಯಾನರ್ ತೆರವುಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪೌರಾಯುಕ್ತರಿಗೆ ಧಮ್ಕಿ ಹಾಕಿದ್ದ ರಾಜೀವ್ ಗೌಡ, ಪ್ರಕರಣ ದಾಖಲಾಗುತ್ತಿದ್ದಂತೆಯೇ ಕಳೆದ ಎರಡು ವಾರಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ. ಈ ನಡುವೆ ಹೈಕೋರ್ಟ್ ಆತನ ಎಫ್‌ಐಆರ್ ರದ್ದುಗೊಳಿಸಲು ನಿರಾಕರಿಸಿದ್ದರಿಂದ ಹಾಗೂ ಕೆಪಿಸಿಸಿ ಶಿಸ್ತು ಸಮಿತಿಯಿಂದ ಅಮಾನತುಗೊಂಡಿದ್ದರಿಂದ ಆತನ ಬಂಧನಕ್ಕೆ ಒತ್ತಡ ಹೆಚ್ಚಾಗಿತ್ತು.
ಪೊಲೀಸರ ಕಣ್ತಪ್ಪಿಸಲು ರಾಜೀವ್ ಗೌಡ ಸಿನಿಮಾ ಮಾದರಿಯಲ್ಲಿ ಮಂಗಳೂರಿನ ಶ್ರೀಮಂತ ಉದ್ಯಮಿಯೊಬ್ಬರ ಆಶ್ರಯ ಪಡೆದಿದ್ದ ಎಂಬ ಸ್ಫೋಟಕ ಮಾಹಿತಿ ತನಿಖೆಯಲ್ಲಿ ಬಯಲಾಗಿದೆ. ತನ್ನ ಕಾರನ್ನು ಮಂಗಳೂರು ರೈಲ್ವೆ ನಿಲ್ದಾಣದಲ್ಲಿ ಬಿಟ್ಟು, ಉದ್ಯಮಿಯ ಕಾರಿನ ಮೂಲಕ ತಲಪಾಡಿ ಮಾರ್ಗವಾಗಿ ಕೇರಳಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಪೊಲೀಸರು ಕಾರಿನ ಜಾಡು ಹಿಡಿದು ಕಾರ್ಯಾಚರಣೆ ನಡೆಸಿದ್ದಾರೆ. ಶಿಡ್ಲಘಟ್ಟ ಪೊಲೀಸ್ ವೃತ್ತ ನಿರೀಕ್ಷಕ ಆನಂದಕುಮಾರ್ ನೇತೃತ್ವದ ತಂಡವು ಕೇರಳದ ಗಡಿಭಾಗದಲ್ಲಿ ಸಿನಿಮೀಯ ರೀತಿಯಲ್ಲಿ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಪ್ರಸ್ತುತ ಆರೋಪಿಯನ್ನು ಶಿಡ್ಲಘಟ್ಟಕ್ಕೆ ಕರೆತರಲಾಗುತ್ತಿದ್ದು, ನಂತರ ಚಿಂತಾಮಣಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ರಾಜೀವ್ ಗೌಡ ವಿರುದ್ಧ ಪೌರಾಯುಕ್ತರ ದೂರು ಮಾತ್ರವಲ್ಲದೆ, ಶಾಸಕ ರವಿಕುಮಾರ್ ಪರವಾಗಿ ಹಾಗೂ ಬೆದರಿಕೆ ಪತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಮೂರು ಎಫ್‌ಐಆರ್‌ಗಳು ದಾಖಲಾಗಿವೆ. ಸರ್ಕಾರಿ ಅಧಿಕಾರಿಯ ಮೇಲೆ ನಡೆದ ಈ ದೌರ್ಜನ್ಯದ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ, ಈ ಬಂಧನವು ಮಹತ್ವ ಪಡೆದುಕೊಂಡಿದೆ.