ಬ್ರಿಟಿಷ್ ವಸಾಹತುಶಾಹಿ ವಿರುದ್ಧದ ಪ್ರಪ್ರಥಮ ಸಶಸ್ತ್ರ ಹೋರಾಟದ ನೆನಪುಗಳನ್ನು ಮರುಕಳಿಸುವ ಐತಿಹಾಸಿಕ ನಾಟಕ ‘ಕೆದಂಬಾಡಿ ರಾಮಯ್ಯ ಗೌಡ’ ಇದೇ ಜನವರಿ 31ರಂದು ಶನಿವಾರ ಸಂಜೆ ಉಬರಡ್ಕದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಮೈ ಮಡಿಯಾರುವಿನಲ್ಲಿ ಪ್ರದರ್ಶನಗೊಳ್ಳಲಿದೆ. ವಿದ್ಯಾಧರ ಕುಡೆಕಲ್ಲು ರವರ ‘ಅಮರ ಸುಳ್ಯ – 1837’ ಕೃತಿ ಆಧಾರಿತ ಈ ನಾಟಕವು ಸುಳ್ಯ ತಾಲೂಕಿನ ಸರ್ಕಾರಿ ಶಿಕ್ಷಕರ ತಂಡದ ಅಭಿನಯದೊಂದಿಗೆ ಕಲಾಭಿಮಾನಿಗಳ ಮುಂದೆ ಅನಾವರಣಗೊಳ್ಳಲಿದೆ.
ಅಮೈ ಮಡಿಯಾರು ಶಾಲೆಯ ಮುಖ್ಯ ಶಿಕ್ಷಕಿಯ ನಿವೃತ್ತಿ ಜೀವನದ ಬೀಳ್ಕೊಡುಗೆ ಸಮಾರಂಭದ ಅಂಗವಾಗಿ ಈ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿದೆ. ಎ.ಕೆ. ಹಿಮಕರ ಅವರ ನಾಟಕ ರಚನೆ ಹಾಗೂ ಮಿಥುನ್ ಕುಮಾರ್ ಸೋನ ಅವರ ನಿರ್ದೇಶನದಲ್ಲಿ ಈ ನಾಟಕ ಸಿದ್ಧಗೊಂಡಿದೆ. ವಿಶೇಷವೆಂದರೆ, ಈ ನಾಟಕವು ಸರ್ಕಾರಿ ನೌಕರರ ಸಂಘದ ಜಿಲ್ಲಾಮಟ್ಟದ ನಾಟಕ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಹೆಗ್ಗಳಿಕೆಯನ್ನು ಹೊಂದಿದ್ದು, ಕಲಾ ಪ್ರದೀಪ್ತ ಸುಳ್ಯ ತಂಡವು ಇದನ್ನು ಅರ್ಪಿಸುತ್ತಿದೆ.

ದಕ್ಷಿಣ ಕನ್ನಡದ ಇತಿಹಾಸದಲ್ಲಿ ‘ಅಮರ ಸುಳ್ಯ ಸಶಸ್ತ್ರ ದಂಗೆ’ಗೆ ವಿಶಿಷ್ಟ ಸ್ಥಾನವಿದೆ. ಕೆದಂಬಾಡಿ ರಾಮಯ್ಯ ಗೌಡರ ನೇತೃತ್ವದಲ್ಲಿ ನಡೆದ ಈ ಹೋರಾಟವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಶಿಕ್ಷಕರ ಈ ಪ್ರಯತ್ನ ಶ್ಲಾಘನೀಯವಾಗಿದೆ. ಜನವರಿ 31ರಂದು ಸಂಜೆ 7:00 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಇತಿಹಾಸ ಮತ್ತು ಕಲಾ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆ ತಿಳಿಸಿದೆ.