ಸಾಹಿತಿ ವೈ.ಎಸ್. ಹರಗಿ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಸುಳ್ಯ: ಸುಳ್ಯದ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಖ್ಯಾತ ಸಾಹಿತಿ ವೈ.ಎಸ್. ಹರಗಿ ಅವರ “ಇಮಾಮ್ ಸಾಹೇಬರ ಕುದುರೆ” ಕಾದಂಬರಿಗೆ 2025ನೇ ಸಾಲಿನ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
2024ನೇ ಸಾಲಿನ ಅತ್ಯುತ್ತಮ ಕೃತಿ ಎಂದು ಪರಿಗಣಿಸಿ ಈ ಗೌರವವನ್ನು ನೀಡಲಾಗಿದೆ. ಪ್ರಶಸ್ತಿಯೊಂದಿಗೆ ರೂ.25,000 ನಗದು ಬಹುಮಾನ, ಫಲಕ ಹಾಗೂ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೈ.ಎಸ್. ಹರಗಿ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಮುಖ ಕಾದಂಬರಿಕಾರ ಮತ್ತು ಕಥೆಗಾರರಾಗಿದ್ದು, ಗ್ರಾಮೀಣ ಬದುಕಿನ ವಾಸ್ತವತೆ ಹಾಗೂ ಜನಸಾಮಾನ್ಯರ ಭಾವನೆಗಳನ್ನು ಸ್ಪರ್ಶಿಸುವ ಕೃತಿಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಇವರ “ಉರಿವ ಜಲ” ಕೃತಿಗೆ 2014ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿತ್ತು.
ಇದಲ್ಲದೆ, ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ರಾಷ್ಟ್ರ ಕವಿ ಕುವೆಂಪು ಪ್ರಶಸ್ತಿ ಸೇರಿದಂತೆ ಚಡಗ ಪ್ರಶಸ್ತಿ, ಡಾ. ಶಾಂತರಾಮ್ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ ಹಾಗೂ ಅವ್ವ ಪ್ರಶಸ್ತಿಗಳೂ ಲಭಿಸಿವೆ.
ಇದೀಗ ಮತ್ತೊಮ್ಮೆ ರಾಜ್ಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿ ದೊರೆತಿರುವುದು ಸಾಹಿತ್ಯ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ.