Home ಜಿಲ್ಲೆಮಂಗಳೂರು ಕರಾವಳಿಯಲ್ಲಿ ‘ಕಡಲ ಪವನ ಶಕ್ತಿ’ ಉತ್ಪಾದನೆಗೆ ಸಂಸದ ಬ್ರಿಜೇಶ್ ಚೌಟ ಆಗ್ರಹ

ಮಂಗಳೂರು ಕರಾವಳಿಯಲ್ಲಿ ‘ಕಡಲ ಪವನ ಶಕ್ತಿ’ ಉತ್ಪಾದನೆಗೆ ಸಂಸದ ಬ್ರಿಜೇಶ್ ಚೌಟ ಆಗ್ರಹ

by Editor

ನವದೆಹಲಿ: ಮಂಗಳೂರು ಕರಾವಳಿಯನ್ನು ‘ಕಡಲ ಪವನ ಶಕ್ತಿ’ (Offshore Wind Energy) ಉತ್ಪಾದನಾ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕೆಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಲೋಕಸಭೆಯ ನಿಯಮ 377ರ ಅಡಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ಓಷಿಯಾನೋಗ್ರಫಿ (NIO) ವರದಿಯಂತೆ ಮಂಗಳೂರಿನ 6,490 ಚ.ಕಿಮೀ ಪ್ರದೇಶವು ಪವನ ಇಂಧನ ಉತ್ಪಾದನೆಗೆ ಅತ್ಯಂತ ಪೂರಕವಾಗಿದೆ ಎಂದು ತಿಳಿಸಿದರು.

ಅರಬ್ಬಿ ಸಮುದ್ರದ ಈ ವಲಯವು ಚಂಡಮಾರುತ ಮತ್ತು ಭೂಕಂಪನದಂತಹ ಅಪಾಯಗಳಿಂದ ಮುಕ್ತವಾಗಿದ್ದು, ದೀರ್ಘಕಾಲದ ಯೋಜನೆಗಳಿಗೆ ಸುರಕ್ಷಿತವಾಗಿದೆ. ನವ ಮಂಗಳೂರು ಬಂದರಿನ ಅತ್ಯಾಧುನಿಕ ಮೂಲಸೌಕರ್ಯಗಳು ಬೃಹತ್ ವಿಂಡ್ ಟರ್ಬೈನ್‌ಗಳ ಸಾಗಣೆಗೆ ಪೂರಕವಾಗಿವೆ. ಅಲ್ಲದೆ, ಮಂಗಳೂರಿನಲ್ಲಿರುವ MRPL, UPCL ನಂತಹ ಬೃಹತ್ ಕೈಗಾರಿಕೆಗಳಿಂದಾಗಿ ಇಲ್ಲಿ ಉತ್ಪಾದನೆಯಾಗುವ ಹಸಿರು ಇಂಧನಕ್ಕೆ ಸ್ಥಳೀಯವಾಗಿಯೇ ದೊಡ್ಡ ಮಾರುಕಟ್ಟೆ ಲಭ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ಕರ್ನಾಟಕದ ವಿದ್ಯುತ್ ಬೇಡಿಕೆ 18,000 ಮೆಗಾವ್ಯಾಟ್ ದಾಟುತ್ತಿದ್ದು, ಇಂಧನ ಭದ್ರತೆಗಾಗಿ ಈ ಯೋಜನೆ ಅತ್ಯಗತ್ಯವಾಗಿದೆ. 2030ರ ವೇಳೆಗೆ 500 GW ನವೀಕರಿಸಬಹುದಾದ ಇಂಧನ ಉತ್ಪಾದಿಸುವ ಭಾರತದ ಗುರಿ ತಲುಪಲು ಮಂಗಳೂರು ವಲಯಕ್ಕೆ ಆದ್ಯತೆ ನೀಡುವಂತೆ ಅವರು ನವೀಕರಿಸಬಹುದಾದ ಇಂಧನ ಸಚಿವಾಲಯವನ್ನು ಆಗ್ರಹಿಸಿದರು.

You may also like

Leave a Comment