Home ಕ್ರೈಂಖ್ಯಾತ ಜ್ಯೋತಿಷ್ಯ ಅರೆಸ್ಟ್! ಅನೈತಿಕ ಸಂಬಂಧ……….ಕೊಲೆಯಲ್ಲಿ ಅಂತ್ಯವೇ?

ಖ್ಯಾತ ಜ್ಯೋತಿಷ್ಯ ಅರೆಸ್ಟ್! ಅನೈತಿಕ ಸಂಬಂಧ……….ಕೊಲೆಯಲ್ಲಿ ಅಂತ್ಯವೇ?

by Editor

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಅನೈತಿಕ ಸಂಬಂಧದ ಹಿನ್ನೆಲೆಯಲ್ಲೊಂದು ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಭವಿಷ್ಯ ಹೇಳಿ ಜನರ ಬದುಕಿಗೆ ದಾರಿ ತೋರಿಸಬೇಕಾದ ಖ್ಯಾತ ಟಿವಿ ಜ್ಯೋತಿಷಿ ಕಮಲಾಕರ್ ಭಟ್, ಪರಸ್ತ್ರೀ ಸಂಗದ ವ್ಯಾಮೋಹಕ್ಕೆ ಒಳಗಾಗಿ ಕೊಲೆ ಸಂಚಿನಲ್ಲಿ ಭಾಗಿಯಾಗಿರುವುದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ.

ಮೃತ ವಸಂತ್ ನಾಯ್ಕ್ ಸಹೋದರ ಮಹೇಶ್ ನಾಯ್ಕ್ ಅವರ ಪತ್ನಿ ಸುಚಿತ್ರಾ ಜೊತೆ ಜ್ಯೋತಿಷಿ ಕಮಲಾಕರ್ ಭಟ್ ಅಕ್ರಮ ಸಂಬಂಧ ಹೊಂದಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧವನ್ನು ಮಹೇಶ್ ನಾಯ್ಕ್ ಪ್ರಶ್ನಿಸಿದ್ದೇ ಪ್ರಕರಣದ ಮೂಲ ಕಾರಣ ಎನ್ನಲಾಗಿದೆ. ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಪತಿಯನ್ನು ಮುಗಿಸಲು ಸುಚಿತ್ರಾ, ಕಮಲಾಕರ್ ಭಟ್ ಹಾಗೂ ಇತರರು ಸೇರಿ ಕೊಲೆ ಸಂಚು ರೂಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಚಿನಂತೆ ಹಂತಕರ ಗ್ಯಾಂಗ್ ಮಹೇಶ್ ನಾಯ್ಕ್ ಮೇಲೆ ಏಕಾಏಕಿ ಮಾರಣಾಂತಿಕ ದಾಳಿ ನಡೆಸಲು ಮುಂದಾಗಿದೆ. ಈ ವೇಳೆ ತಮ್ಮನನ್ನು ರಕ್ಷಿಸಲು ಸ್ಥಳಕ್ಕೆ ಧಾವಿಸಿದ ಅಣ್ಣ ವಸಂತ್ ನಾಯ್ಕ್ ಹಂತಕರ ಕೈಗೆ ಸಿಲುಕಿ ಬರ್ಬರವಾಗಿ ಕೊಲೆಯಾಗಿದ್ದಾರೆ. ಮಹೇಶ್ ನಾಯ್ಕ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅನೈತಿಕ ಸಂಬಂಧದ ಲಾಲಸೆಗೆ ಬಿದ್ದ ಜ್ಯೋತಿಷಿ ಮತ್ತು ಮಹಿಳೆಯ ಕೃತ್ಯಕ್ಕೆ, ಯಾವುದೇ ತಪ್ಪಿಲ್ಲದ ಅಮಾಯಕ ವ್ಯಕ್ತಿಯೊಬ್ಬ ಬಲಿಯಾದದ್ದು ಇಡೀ ಸಿದ್ದಾಪುರ ತಾಲ್ಲೂಕನ್ನು ಬೆಚ್ಚಿಬೀಳಿಸಿದೆ.

ಘಟನೆ ನಡೆದ ಕೇವಲ 24 ಗಂಟೆಗಳೊಳಗೆ ಪೊಲೀಸರು ಪ್ರಕರಣವನ್ನು ಭೇದಿಸಿದ್ದು, ವಸಂತ್ ನಾಯ್ಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ನಾಯ್ಕ್ ಪತ್ನಿ ಸುಚಿತ್ರಾ, ಆಕೆಯ ತಂದೆ ಲೋಕನಾಥ್ ಹಾಗೂ ಪ್ರಮುಖ ಸೂತ್ರಧಾರನೆಂದು ಹೇಳಲಾಗಿರುವ ಜ್ಯೋತಿಷಿ ಕಮಲಾಕರ್ ಭಟ್ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ.

You may also like

Leave a Comment