121
ಬೆಳ್ತಂಗಡಿ: ತಾಲೂಕಿನ ಕುವೆಟ್ಟುವಿನ 9ನೇ ತರಗತಿ ವಿದ್ಯಾರ್ಥಿ ಸುಮಂತ್ ಸಾವಿನ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಶಾಸಕ ಹರೀಶ್ ಪೂಂಜಾ ವಿಧಾನಸಭೆಯಲ್ಲಿ ಆಗ್ರಹಿಸಿದ್ದಾರೆ. ಸೋಮವಾರ ಸದನದಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಗೃಹ ಸಚಿವರ ಗಮನ ಸೆಳೆದು ಸಮಗ್ರ ತನಿಖೆಗೆ ಒತ್ತಾಯಿಸಿದರು.
“ಇದು ಕೇವಲ ಒಬ್ಬ ಬಾಲಕನ ಸಾವಲ್ಲ, ಜಿಲ್ಲೆಯಾದ್ಯಂತ ಜನರು ಈ ಘಟನೆಯಿಂದ ಆತಂಕಗೊಂಡಿದ್ದಾರೆ” ಎಂದು ಪೂಂಜಾ ತಿಳಿಸಿದರು. ಘಟನೆಯ ಹಿಂದಿನ ಸತ್ಯಾಸತ್ಯತೆಗಳನ್ನು ಪಾರದರ್ಶಕವಾಗಿ ತನಿಖೆ ನಡೆಸಿ, ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ನೀಡಬೇಕು ಹಾಗೂ ಮೃತ ಬಾಲಕನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು. ಈ ನಿಗೂಢ ಸಾವಿನ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವುದು ಜಿಲ್ಲೆಯ ಜನರ ನಿರೀಕ್ಷೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.