ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ 66ರ ಕುಂಬ್ಳೆ ಅರಿಕ್ಕಾಡಿಯಲ್ಲಿ ಆರಂಭಿಸಲಾಗಿದ್ದ ಟೋಲ್ ಪ್ಲಾಜಾವನ್ನು ಮುಚ್ಚುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಂಗಳವಾರ ಮಹತ್ವದ ಆದೇಶ ಹೊರಡಿಸಿದೆ. ಟೋಲ್ ವಸೂಲಿ ಆರಂಭವಾದ ಕೇವಲ 22 ದಿನಗಳಲ್ಲಿ ಸಾರ್ವಜನಿಕರ ತೀವ್ರ ಪ್ರತಿರೋಧಕ್ಕೆ ಮಣಿದು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಜನವರಿ 12ರಂದು ಟೋಲ್ ಸಂಗ್ರಹ ಆರಂಭವಾದಾಗಿನಿಂದ ಶಾಸಕ ಎ.ಕೆ.ಎಂ. ಅಶ್ರಫ್ ನೇತೃತ್ವದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ರಾಷ್ಟ್ರೀಯ ಹೆದ್ದಾರಿ ನಿಯಮದ ಪ್ರಕಾರ ಎರಡು ಟೋಲ್ ಕೇಂದ್ರಗಳ ನಡುವೆ 60 ಕಿ.ಮೀ. ಅಂತರವಿರಬೇಕು. ಆದರೆ, ತಲಪಾಡಿ ಟೋಲ್‌ನಿಂದ ಕೇವಲ 22 ಕಿ.ಮೀ. ಅಂತರದಲ್ಲಿ ಅರಿಕ್ಕಾಡಿ ಪ್ಲಾಜಾ ಸ್ಥಾಪಿಸಿರುವುದು ಕಾನೂನುಬಾಹಿರ ಎಂಬ ಆಕ್ರೋಶ ವ್ಯಕ್ತವಾಗಿತ್ತು. ಸ್ಥಳೀಯರ ಹೋರಾಟ ಹಾಗೂ ಬಿಜೆಪಿ ಮುಖಂಡರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.
ಟೋಲ್ ಬಂದ್ ಆದೇಶ ಹೊರಬೀಳುತ್ತಿದ್ದಂತೆ ಕಾಸರಗೋಡು ಮತ್ತು ಮಂಗಳೂರು ನಡುವೆ ಸಂಚರಿಸುವ ಸಾವಿರಾರು ವಾಹನ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ. ರಾಜಕೀಯ ಪಕ್ಷಗಳು ಈ ಯಶಸ್ಸಿನ ಶ್ರೇಯಕ್ಕಾಗಿ ಸಂಭ್ರಮಾಚರಣೆ ನಡೆಸುತ್ತಿವೆ.