Home ಬ್ರೇಕಿಂಗ್ ನ್ಯೂಸ್ಉರುವಾಲು ಗ್ರಾಮದ ಯುವತಿ ಸುಪ್ರೀತಾ ನಾಪತ್ತೆ

ಉರುವಾಲು ಗ್ರಾಮದ ಯುವತಿ ಸುಪ್ರೀತಾ ನಾಪತ್ತೆ

by Editor

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಮಜಿಕುಡೇಲು ನಿವಾಸಿ ಸುಪ್ರೀತಾ (20) ಎಂಬ ಯುವತಿ ಮಂಗಳವಾರ ನಸುಕಿನಿಂದ ನಾಪತ್ತೆಯಾಗಿದ್ದಾರೆ. ದಿವಂಗತ ಶೀನಪ್ಪ ಅವರ ಪುತ್ರಿಯಾದ ಈಕೆ, ಸೋಮವಾರ ರಾತ್ರಿ ಮನೆಯಲ್ಲಿ ಮಲಗಿದ್ದರು. ಆದರೆ ಮಂಗಳವಾರ ಬೆಳಿಗ್ಗೆ ನೋಡಿದಾಗ ಅವರು ಕಾಣೆಯಾಗಿದ್ದು, ಕುಟುಂಬಸ್ಥರು ನಡೆಸಿದ ಹುಡುಕಾಟ ಫಲ ನೀಡಿಲ್ಲ. ಆರಂಭದಲ್ಲಿ ಫೋನ್ ಕರೆ ಸ್ವೀಕರಿಸದ ಸುಪ್ರೀತಾ, ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎಂದು ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ನಾಪತ್ತೆಯಾದ ಸುಪ್ರೀತಾ ಅವರು 10ನೇ ತರಗತಿಯವರೆಗೆ ಓದಿದ್ದು, ಸುಮಾರು 4 ಅಡಿ 6 ಇಂಚು ಎತ್ತರವಿದ್ದಾರೆ. ಸಪೂರ ಶರೀರ ಹಾಗೂ ಉರುಟು ಮುಖದ ಲಕ್ಷಣಗಳನ್ನು ಹೊಂದಿರುವ ಇವರು ಕನ್ನಡ ಮತ್ತು ತುಳು ಭಾಷೆಗಳನ್ನು ಸರಾಗವಾಗಿ ಮಾತನಾಡಬಲ್ಲರು. ಮನೆಯವರಿಂದ ಯಾವುದೇ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈ ಯುವತಿಯ ಬಗ್ಗೆ ಯಾವುದೇ ಮಾಹಿತಿ ಅಥವಾ ಸುಳಿವು ಲಭ್ಯವಾದಲ್ಲಿ ಸಾರ್ವಜನಿಕರು ತಕ್ಷಣ ಉಪ್ಪಿನಂಗಡಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕು. ಠಾಣಾಧಿಕಾರಿ ಸುತೇಶ್ ಎಸ್. ಅವರು ಈ ಕುರಿತು ಪ್ರಕಟಣೆ ಹೊರಡಿಸಿ, ಯುವತಿಯ ಪತ್ತೆಗೆ ಸಹಕರಿಸುವಂತೆ ಜನತೆಯಲ್ಲಿ ವಿನಂತಿಸಿದ್ದಾರೆ.

You may also like

Leave a Comment