73
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಗೇಜ್ ಕಳವು ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿ ಮೂಲದ ಶಾಂತ ರಮೇಶ್ ಚಿನ್ನಾಭರಣ ಕಳೆದುಕೊಂಡ ಮಹಿಳೆ.ಅಮೇರಿಕಾಗೆ ತೆರಳುತ್ತಿದ್ದ ಶಾಂತ ರಮೇಶ್ ದೇವನಹಳ್ಳಿ ಏರ್ ಪೋರ್ಟ್‌ನಿಂದ ಅಬುದಾಬಿ ಮೂಲಕ ಪ್ರಯಾಣ ಮಾಡಿದ್ದರು. ಏರ್ ಪೋರ್ಟ್‌ನಲ್ಲಿ ಲಗೇಜ್ ಚೆಕ್ ಇನ್ ಮಾಡಿ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಳಿಸಿ ವಿಮಾನ ಹತ್ತಿದ್ದರು.
ಆದರೆ ಅಬುದಾಬಿ ವಿಮಾನ ನಿಲ್ದಾಣದಲ್ಲಿ ಲಗೇಜ್ ಪಡೆದುಕೊಳ್ಳುವ ವೇಳೆ ಲಗೇಜಿನೊಳಗಿದ್ದ 790 ಗ್ರಾಂ ಚಿನ್ನ, ಸುಮಾರು 8 ಲಕ್ಷ ರೂ. ಮೌಲ್ಯದ ವಜ್ರಾಭರಣ ಹಾಗೂ 20 ಸಾವಿರ ರೂ. ಮೌಲ್ಯದ ಔಷಧಿಗಳು ಕಳವಾಗಿರುವುದು ಪತ್ತೆಯಾಗಿದೆ.
ಘಟನೆ ಬಳಿಕ ಶಾಂತ ರಮೇಶ್ ಬೆಂಗಳೂರಿಗೆ ಮರಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.