ಹೊಸ ದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ದೇಶಾದ್ಯಂತ ಓಲಾ, ಉಬರ್ ಮತ್ತು ರ್ಯಾಪಿಡೋ ಚಾಲಕರು ಬೃಹತ್ ಮುಷ್ಕರ ಹಮ್ಮಿಕೊಂಡಿದ್ದಾರೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರಮುಖ ಪ್ರತಿಭಟನೆ ನಡೆಯಲಿದ್ದು, ಇದಕ್ಕೆ ಬೆಂಬಲ ಸೂಚಿಸಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳಲ್ಲಿ ಭಾರೀ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ಚಾಲಕರ ಸಂಘಟನೆಗಳು ಒಕ್ಕೂಟವಾಗಿ ಈ ಪ್ರತಿಭಟನೆಗೆ ಕರೆ ನೀಡಿವೆ.
ಸೇವೆಯಲ್ಲಿನ ಕಮಿಷನ್ ದರ ಕಡಿತ ಮತ್ತು ಚಾಲಕರ ಸುರಕ್ಷತೆ ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಚಾಲಕರು ಒತ್ತಾಯಿಸುತ್ತಿದ್ದಾರೆ. ಪ್ರತಿಭಟನೆಯ ಅಂಗವಾಗಿ ಚಾಲಕರು ಸುಮಾರು ಆರು ಗಂಟೆಗಳ ಕಾಲ ತಮ್ಮ ಮೊಬೈಲ್ ಆ್ಯಪ್‌ಗಳನ್ನು ಆಫ್ ಮಾಡಲಿದ್ದಾರೆ. ಇದರಿಂದಾಗಿ ಬೆಳಿಗ್ಗೆಯಿಂದಲೇ ಕಚೇರಿ ಹಾಗೂ ವಿಮಾನ ನಿಲ್ದಾಣಗಳಿಗೆ ತೆರಳುವ ಪ್ರಯಾಣಿಕರು ಪರದಾಡುವಂತಾಗಿದೆ.
ಮುಷ್ಕರದ ಹಿನ್ನೆಲೆಯಲ್ಲಿ ಮೆಟ್ರೋ ಮತ್ತು ಬಸ್ ಸೇವೆಗಳ ಮೇಲೆ ಹೆಚ್ಚಿನ ಒತ್ತಡ ಕಂಡುಬಂದಿದೆ. ಆ್ಯಪ್‌ಗಳು ಲಭ್ಯವಿದ್ದರೂ ಹೆಚ್ಚಿನ ‘ಸರ್ಜ್ ಪ್ರೈಸ್’ ಅಥವಾ ದರ ಏರಿಕೆಯ ಭೀತಿ ಪ್ರಯಾಣಿಕರನ್ನು ಕಾಡುತ್ತಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಮುಖ ನಗರಗಳಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದ್ದು, ಮುಷ್ಕರವು ಸಾರಿಗೆ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಿದೆ.