Home ರಾಜ್ಯಬಳ್ಳಾರಿ: ‘ನಿನ್ನ ನೆನಪಲಿ’ ಪುಸ್ತಕ ಲೋಕಾರ್ಪಣೆ

ಬಳ್ಳಾರಿ: ‘ನಿನ್ನ ನೆನಪಲಿ’ ಪುಸ್ತಕ ಲೋಕಾರ್ಪಣೆ

by Editor

ಬಳ್ಳಾರಿ, ಫೆ.08: ಯೌವ್ವನದ ಜೀವನೋತ್ಸಾಹ ಸದಾ ಚೈತನ್ಯದಿಂದ ಮುಂದುವರಿಯಬೇಕು ಎಂದು ಹ್ಯಾಲಿಸ್ ಬ್ಲೂ ಸ್ಟೀಲ್ಸ್ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷ ಕೆ.ಎಂ. ಶಿವಮೂರ್ತಿ ಅಭಿಪ್ರಾಯಪಟ್ಟರು.

ಅಖಂಡ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿವೇಕ ಪುಸ್ತಕ ಪ್ರಕಾಶನದ ವತಿಯಿಂದ ಶನಿವಾರ ಸಂಜೆ ನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ದ ಎಸ್.ಆರ್. ಶರಣ ಕುಮಾರ್ ಅವರ ಪ್ರಥಮ ಹನಿಗವನ ಸಂಕಲನ ‘ನಿನ್ನ ನೆನಪಲಿ’ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಕೃತಿಯಲ್ಲಿನ ಪ್ರತಿಯೊಂದು ಹನಿಗವನವೂ ಓದುಗರ ಮನೋಭಾವನೆಗೆ ತಕ್ಕಂತೆ ಅವರವರ ಯೌವ್ವನದ ಸಿಹಿ ನೆನಪುಗಳನ್ನು ಮತ್ತೆ ಮತ್ತೆ ಜಾಗೃತಗೊಳಿಸಿ ಅಪಾರ ಆನಂದವನ್ನು ನೀಡುತ್ತದೆ ಎಂದರು.

ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ದೀಪ ಬೆಳಗಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿ, ಕೃತಿಯನ್ನು ಲೋಕಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳ್ಳಾರಿ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಕೃತಿ ಪರಿಚಯ ಮಾಡುತ್ತಾ, ಎಸ್.ಆರ್. ಶರಣ ಕುಮಾರ್ ಅವರು ‘ನಿನ್ನ ನೆನಪಲಿ’ ಹನಿಗವನ ಸಂಕಲನದ ಮೂಲಕ ಕನ್ನಡ ಕಾವ್ಯ ಲೋಕಕ್ಕೆ ತಮ್ಮ ಪ್ರಥಮ ಕೃತಿಯನ್ನು ಅರ್ಪಿಸಿರುವುದು ಶ್ಲಾಘನೀಯ ಸಾಧನೆ ಎಂದು ಹೇಳಿದರು. ಈ ಕೃತಿಯ ಕವನಗಳು ಪ್ರತಿಯೊಬ್ಬ ಓದುಗರಿಗೂ ತಮ್ಮ ಯೌವ್ವನದ ಮಧುರ ಕ್ಷಣಗಳನ್ನು ಸವಿಯುವಂತೆ ಮಾಡುತ್ತವೆ. ಶರಣ ಕುಮಾರ್ ಅವರ ಕಾವ್ಯ ಒಂದು ಕಾಲಘಟ್ಟಕ್ಕೆ ಸೀಮಿತವಾಗದೆ ಎಲ್ಲ ಕಾಲಕ್ಕೂ ಸಲ್ಲುವ ಚಿರಂತನತೆಯನ್ನು ಹೊಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆಯ ಜಂಟಿ ಕಾರ್ಯದರ್ಶಿ ಮೇಲ್ಸೀಮೆ ಪಂಪನಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ‘ನಿನ್ನ ನೆನಪಲಿ’ ಕೃತಿ ಓದುಗರ ಮನಸ್ಸಿನಲ್ಲಿ ಮಧುರ ಭಾವನೆಗಳನ್ನು ಮೂಡಿಸುತ್ತದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಕವಿ ಎಸ್.ಆರ್. ಶರಣ ಕುಮಾರ್ ಮಾತನಾಡಿ, ಹನಿಗವನಗಳ ಮೂಲಕ ಕನ್ನಡ ಕಾವ್ಯ ಲೋಕದಲ್ಲಿ ತಮ್ಮ ಮೊದಲ ಹೆಜ್ಜೆ ಇಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಬಾಲ್ಯ ಮತ್ತು ಯೌವ್ವನದ ಸಿಹಿ ನೆನಪುಗಳು ಮನಸ್ಸನ್ನು ಕಾಡಿದ ಕಾರಣ ಅವುಗಳನ್ನು ಕೃತಿ ರೂಪದಲ್ಲಿ ನೀಡಲು ಸಾಧ್ಯವಾಯಿತು. ಇದಕ್ಕೆ ಸಹಕರಿಸಿದ ಎಲ್ಲರಿಗೂ ಅವರು ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ವಿವೇಕ ಪುಸ್ತಕದ ಶ್ರೀಮತಿ ಎಸ್.ಆರ್. ರಾಜೇಶ್ವರಿ, ಎಸ್.ಆರ್. ಸಿದ್ದರಾಮನಗೌಡ, ಎಸ್.ಆರ್. ಚಂದ್ರಶೇಖರ ಪಾಟೀಲ, ಮಾಜಿ ಮಹಾಪೌರ ಇಬ್ರಾಹಿಂ ಬಾಬು, ಬಸವರಾಜ ಗದಗಿನ ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಸಾಪ ಗೌರವ ಕಾರ್ಯದರ್ಶಿ ಡಾ. ಕೆ. ಶಿವಲಿಂಗಪ್ಪ ಹಂದಿಹಾಳು ಪ್ರಾಸ್ತಾವಿಕ ನುಡಿಗಳನ್ನು ನುಡಿದರೆ, ಶ್ರೀ ಎರೇಗೌಡ ಪ್ರಾರ್ಥನೆ ಸಲ್ಲಿಸಿದರು. ಡಾ. ಭ್ರಮರಾಂಭ ಯಾಟಿ ಕಾರ್ಯಕ್ರಮ ನಿರೂಪಿಸಿದರು.

You may also like

Leave a Comment