Home ಜಿಲ್ಲೆಬಳ್ಳಾರಿ: ಉತ್ಖನನದಲ್ಲಿ 3ರಿಂದ 5 ಸಾವಿರ ವರ್ಷದ ಮಾನವ ಅಸ್ಥಿಪಂಜರಗಳು ಪತ್ತೆ

ಬಳ್ಳಾರಿ: ಉತ್ಖನನದಲ್ಲಿ 3ರಿಂದ 5 ಸಾವಿರ ವರ್ಷದ ಮಾನವ ಅಸ್ಥಿಪಂಜರಗಳು ಪತ್ತೆ

Ballari: Human skeletons dating back 3,000 to 5,000 years discovered during excavation

by Editor

ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆ ಪಟ್ಟಣದ ಗೌಡ್ರ ಮೂಲೆ ಬೆಟ್ಟ ಪ್ರದೇಶದಲ್ಲಿ ನಡೆಯುತ್ತಿರುವ ಉತ್ಖನನ ಹಾಗೂ ಶೋಧನಾ ಕಾರ್ಯದ ವೇಳೆ ಎರಡು ಪುರಾತನ ಮಾನವ ಅಸ್ಥಿಪಂಜರಗಳು ಪತ್ತೆಯಾಗಿವೆ. ಈ ಮಹತ್ವದ ಉತ್ಖನನ ಕಾರ್ಯವನ್ನು ಅಮೆರಿಕದ ಹಾರ್ಟ್‌ವಿಕ್ ಕಾಲೇಜಿನ ಪ್ರಾಧ್ಯಾಪಕಿ ಹಾಗೂ ಯೋಜನೆಯ ಸಹ ನಿರ್ದೇಶಕಿ ಡಾ. ನಮಿತಾ ಎಸ್. ಸುಗಂಧಿ ಅವರ ನೇತೃತ್ವದ ತಂಡ ನಡೆಸುತ್ತಿದೆ.

ಕಳೆದ ವಾರ ಮಣ್ಣಿನೊಳಗೆ ಮಾನವ ಎಲುಬುಗಳು ಪತ್ತೆಯಾಗಿದ್ದು, ನಂತರ ಮುಂದುವರಿದ ಶೋಧನಾ ಕಾರ್ಯದಲ್ಲಿ ಇದೀಗ ಎರಡು ಸಂಪೂರ್ಣ ಅಸ್ಥಿಪಂಜರಗಳು ಬೆಳಕಿಗೆ ಬಂದಿವೆ. ಸುಮಾರು 5.5 ಅಡಿ ಉದ್ದವಿರುವ ಈ ಅಸ್ಥಿಪಂಜರಗಳು ಒಂದರ ಪಕ್ಕದಲ್ಲಿ ಮತ್ತೊಂದು ಇರಿಸಿರುವ ಸ್ಥಿತಿಯಲ್ಲಿ ಕಂಡುಬಂದಿರುವುದು ವಿಶೇಷ ಕುತೂಹಲಕ್ಕೆ ಕಾರಣವಾಗಿದೆ.

ಅಸ್ಥಿಪಂಜರಗಳು ಉತ್ತಮ ಸ್ಥಿತಿಯಲ್ಲಿ ದೊರೆತಿದ್ದು, ಮೃತದೇಹಗಳ ಮೇಲೆ ಕಲ್ಲುಗಳನ್ನು ಇಡುವ ಪದ್ಧತಿ ಇದ್ದಿತೆಂಬುದಕ್ಕೆ ಇದು ಸಾಕ್ಷಿಯಾಗಿದೆ. ಇದು ಪುರಾತನ ಕಾಲದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಆಚರಣೆಗಳ ಕುರಿತು ಮಹತ್ವದ ಮಾಹಿತಿಯನ್ನು ನೀಡುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಉತ್ಖನನ ಪ್ರದೇಶದ ಸುತ್ತಮುತ್ತ ಪಾತ್ರೆಗಳ ತುಂಡುಗಳು, ಮೈಕ್ರೊಲಿಥಿಕ್ ಉಪಕರಣಗಳು ಹಾಗೂ ಪ್ರಾಚೀನ ಮಾನವ ಉಪಕರಣ ಬಳಕೆಯ ಸ್ಪಷ್ಟ ಸಾಕ್ಷ್ಯಗಳು ಪತ್ತೆಯಾಗಿವೆ. ಇದರಿಂದ ತೆಕ್ಕಲಕೋಟೆ ಪ್ರದೇಶವು ಪುರಾತನ ಕಾಲದಲ್ಲಿ ಪ್ರಮುಖ ಮಾನವ ವಾಸಸ್ಥಳವಾಗಿತ್ತು ಎಂಬುದಕ್ಕೆ ಬಲವಾದ ಸೂಚನೆ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಸ್ಥಿಪಂಜರಗಳು ಸುಮಾರು 3,000 ರಿಂದ 5,000 ವರ್ಷಗಳಷ್ಟು ಹಳೆಯದಾಗಿರಬಹುದೆಂದು ಅಂದಾಜಿಸಲಾಗಿದ್ದು, ನಿಖರ ಕಾಲಾವಧಿ ನಿರ್ಧಾರಕ್ಕಾಗಿ ಅವುಗಳನ್ನು ಕಾರ್ಬನ್ ಡೇಟಿಂಗ್ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಮಾಹಿತಿ ನೀಡಲಾಗಿದೆ.

ಈ ನಡುವೆ ರಾಜ್ಯ ಪುರಾತತ್ವ ಇಲಾಖೆಯ ಉಪ ನಿರ್ದೇಶಕ ಹಾಗೂ ಉತ್ಖನನ ಕಾರ್ಯದ ನಿರ್ದೇಶಕ ಆರ್. ಶಾಜೇಶ್ವರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, “ಇಂತಹ ಅಪರೂಪದ ಪುರಾತತ್ವ ಸ್ಥಳವನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲೂ ಇದೆ” ಎಂದು ಹೇಳಿದರು.

ಡಾ. ಸುಗಂಧಿ ಅವರು 2019ರಲ್ಲಿ ಮೊದಲ ಬಾರಿಗೆ ತೆಕ್ಕಲಕೋಟೆಗೆ ಭೇಟಿ ನೀಡಿ ಉತ್ಖನನ ಕಾರ್ಯ ಆರಂಭಿಸಿದ್ದರು. 2025ರಲ್ಲಿ ಎರಡನೇ ಬಾರಿ ಭೇಟಿ ನೀಡಿ ‘ಮ್ಯಾನ್ ಅಂಡ್ ಎನ್ವಿರಾನ್ಮೆಂಟ್ – ತೆಕ್ಕಲಕೋಟೆ’ ಎಂಬ ಅಧ್ಯಯನವನ್ನು ಮಂಡಿಸಿದ್ದರು. ಇದೀಗ ಮೂರನೇ ಬಾರಿ ಉತ್ಖನನ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಗಮನಾರ್ಹವಾಗಿ, 1964ರಲ್ಲಿ ಖ್ಯಾತ ಪುರಾತತ್ವ ತಜ್ಞ ಎಂ.ಎಸ್. ನಾಗರಾಜ ರಾವ್ ಅವರು ಈ ಪ್ರದೇಶದಲ್ಲಿ ಉತ್ಖನನ ನಡೆಸಿ, ತೆಕ್ಕಲಕೋಟೆಯ ಪುರಾತತ್ವ ಮಹತ್ವವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಿದ್ದರು. ಅವರ ಅಧ್ಯಯನವೇ ಡಾ. ಸುಗಂಧಿ ಅವರಿಗೆ ಪ್ರೇರಣೆಯಾಗಿದ್ದು, ಈ ಪ್ರದೇಶವನ್ನು ಪುನಃ ಅಧ್ಯಯನಕ್ಕೆ ಆಯ್ಕೆ ಮಾಡಲು ಕಾರಣವಾಗಿದೆ.

You may also like

Leave a Comment