ಬೆಂಗಳೂರು, ಫೆ.09: ಮೆಟ್ರೋ ದರ ಏರಿಕೆಯ ಬಗ್ಗೆ ವ್ಯಾಪಕ ಜನಾಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ನಿರ್ಧಾರದಿಂದ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಕೊನೆಗೂ ಹಿಂದೆ ಸರಿದಿದೆ. ಇಂದಿನಿಂದ ಜಾರಿಗೆ ಬರಬೇಕಿದ್ದ ವಾರ್ಷಿಕ ಸ್ವಯಂಚಾಲಿತ ದರ ಏರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಕಳೆದ 10 ತಿಂಗಳ ಹಿಂದಷ್ಟೇ ಮೆಟ್ರೋ ದರ ಹೆಚ್ಚಳ ಮಾಡಿದ್ದ ದರ ನಿಗದಿ ಸಮಿತಿ, ಇದೀಗ ಮತ್ತೊಮ್ಮೆ ಶೇ.5ರಷ್ಟು ದರ ಏರಿಕೆಗೆ ಶಿಫಾರಸು ಮಾಡಿತ್ತು. ಈ ಶಿಫಾರಸಿಗೆ ರಾಜ್ಯ ಸರ್ಕಾರದ ಒಪ್ಪಿಗೆಯೂ ಲಭಿಸಿದ್ದು, ನಾಳೆಯಿಂದ ಜಾರಿಗೆ ಬರಬೇಕಾಗಿತ್ತು. ಆದರೆ, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ದರ ಹೆಚ್ಚಳ ಮಾಡದಂತೆ ಬಿಎಂಆರ್‌ಸಿಎಲ್‌ಗೆ ಸೂಚನೆ ನೀಡಿದೆ.
ಮೆಟ್ರೋ ದರ ಏರಿಕೆ ವಿಚಾರ ರಾಜ್ಯ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವಣ ತೀವ್ರ ವಾಗ್ವಾದಕ್ಕೂ ಕಾರಣವಾಗಿತ್ತು. ಈ ನಡುವೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಖಾತೆ ಸಚಿವ ಎಂ.ಎಲ್. ಖಟ್ಟರ್ ಅವರನ್ನು ಭೇಟಿಯಾದ ಸಂಸದ ತೇಜಸ್ವಿ ಸೂರ್ಯ, ವಾರ್ಷಿಕ ದರ ಏರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಹಾಗೂ ಅಗತ್ಯವಿದ್ದಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ದರ ಪರಿಷ್ಕರಣೆಗೆ ಹೊಸ ದರ ನಿಗದಿ ಸಮಿತಿಯನ್ನು ರಚಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಪ್ರಸ್ತಾವಿತ ದರ ಏರಿಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಬಿಎಂಆರ್‌ಸಿಎಲ್‌ಗೆ ಸೂಚಿಸಿದ್ದಾರೆ ಎಂದು ಶನಿವಾರ ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಮೆಟ್ರೋ ದರ ಏರಿಕೆ ನಿರ್ಧಾರದಿಂದ ಬಿಎಂಆರ್‌ಸಿಎಲ್ ಹಿಂದೆ ಸರಿದಿದ್ದು, ಬೆಂಗಳೂರಿಗರಿಗೆ ಸ್ವಲ್ಪ ನೆಮ್ಮದಿ ಸಿಕ್ಕಂತಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟಣೆ ಹೊರಡಿಸಿರುವ ಬಿಎಂಆರ್‌ಸಿಎಲ್, ಫೆ.5ರಂದು ಪ್ರಕಟಿಸಿದ್ದ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಂತೆ ನಾಳೆಯಿಂದ ವಾರ್ಷಿಕ ಸ್ವಯಂಚಾಲಿತ ದರ ಜಾರಿಗೆ ಬರಲಿಲ್ಲ; ಈ ನಿರ್ಧಾರವನ್ನು ಮುಂದಿನ ಆದೇಶದವರೆಗೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಪರಿಷ್ಕೃತ ದರ ಕುರಿತು ಅಂತಿಮ ನಿರ್ಧಾರವನ್ನು ನಿರ್ದೇಶಕರ ಮಂಡಳಿಯ ಪರಿಶೀಲನೆಯ ಬಳಿಕ ಪ್ರಕಟಿಸಲಾಗುವುದು ಎಂದು ನಿಗಮ ತಿಳಿಸಿದೆ. ಬೆಂಗಳೂರು ನಾಗರಿಕರಿಗೆ ಸುರಕ್ಷಿತ, ನಂಬಿಗಸ್ತ ಹಾಗೂ ಕೈಗೆಟುಕುವ ಮೆಟ್ರೋ ಸೇವೆ ಒದಗಿಸಲು ಬಿಎಂಆರ್‌ಸಿಎಲ್ ಸದಾ ಬದ್ಧವಾಗಿದೆ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.