Home ರಾಜ್ಯಸುಳ್ಯ: ನರೇಗಾ ಹೆಸರು ಬದಲಾವಣೆ ವಿರೋಧಿಸಿ ಕಾಂಗ್ರೆಸ್‌ ಪಕ್ಷದಿಂದ ಪ್ರತಿಭಟನಾ ಪಾದಯಾತ್ರೆ

ಸುಳ್ಯ: ನರೇಗಾ ಹೆಸರು ಬದಲಾವಣೆ ವಿರೋಧಿಸಿ ಕಾಂಗ್ರೆಸ್‌ ಪಕ್ಷದಿಂದ ಪ್ರತಿಭಟನಾ ಪಾದಯಾತ್ರೆ

Sullia: Congress Party Holds Protest March Opposing the Renaming of NREGA

by Editor

 

ಸುಳ್ಯ, ಫೆ.09 ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ನರೇಗಾ ಯೋಜನೆಯ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷವು ಸುಳ್ಯದಿಂದ ಮುಲ್ಕಿಯವರೆಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ. ಈ ಪ್ರತಿಭಟನಾ ಪಾದಯಾತ್ರೆಗೆ ಫೆ. 9ರಂದು ಸುಳ್ಯದ ಗಾಂಧಿನಗರದಲ್ಲಿ ಚಾಲನೆ ನೀಡಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಮಾಜಿ ಸಂಸದ ಜಯಪ್ರಕಾಶ್ ಹೆಗಡೆ ಮಾತನಾಡಿ, “ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜಾರಿಗೆ ತಂದ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಹೆಸರನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬದಲಾಯಿಸಿರುವುದು ಮಾತ್ರವಲ್ಲದೆ, ರೈತರು ಹಾಗೂ ರಾಜ್ಯ ಸರ್ಕಾರಗಳಿಗೆ ತೊಂದರೆಯಾಗುವಂತೆ ಮಾಡಿ ಯೋಜನೆಯನ್ನು ನಿಧಾನವಾಗಿ ಸ್ಥಗಿತಗೊಳಿಸುವ ಸಂಚು ರೂಪಿಸಿದೆ. ಈ ಯೋಜನೆಯಿಂದ ಲಕ್ಷಾಂತರ ಗ್ರಾಮೀಣ ಜನರು ಲಾಭ ಪಡೆದಿದ್ದಾರೆ. ಆದರೆ ಬಿಜೆಪಿ ಆಡಳಿತದಲ್ಲಿ ಯೋಜನೆಯ ಸ್ವರೂಪ ಬದಲಿಸಿ, ಬೇಕಾದವರಿಗೆ ಮಾತ್ರ ಲಾಭ ಸಿಗುವಂತೆ ಮಾಡಲಾಗುತ್ತಿದೆ. ಇದನ್ನು ಯುವಜನತೆ ಅರ್ಥಮಾಡಿಕೊಳ್ಳಬೇಕು” ಎಂದು ಹೇಳಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಿಸಿಸಿ ಅಧ್ಯಕ್ಷ **ಹರೀಶ್ ಕುಮಾರ್** ಮಾತನಾಡಿ, “ಬಿಜೆಪಿ ಸರ್ಕಾರದ ದುರಾಡಳಿತವನ್ನು ಸಹಿಸಲು ಸಾಧ್ಯವಾಗದೆ ಕಾಂಗ್ರೆಸ್ ಪಕ್ಷ ಜನಜಾಗೃತಿಗಾಗಿ ಈ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಕೇಂದ್ರ ಸರ್ಕಾರದ ನಡೆ ಖಂಡಿಸಿ ರಾಷ್ಟ್ರವ್ಯಾಪಿ ಹೋರಾಟ ನಡೆಯುತ್ತಿದ್ದು, ಅದರ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸುಳ್ಯದಿಂದ ಮುಲ್ಕಿಯವರೆಗೆ ಪಾದಯಾತ್ರೆ ನಡೆಸಲು ನಿರ್ಧರಿಸಿದೆ” ಎಂದು ಹೇಳಿದರು.

ವೇದಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರುಗಳಾದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮಂಗಳೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಲೋಬೋ, ಹಾಗೆಯೇ ಜಿ.ಎ. ಬಾವ, ಆರ್. ಪದ್ಮರಾಜ್ ಪೂಜಾರಿ, ಎಂ.ಎಸ್. ಮೊಹಮ್ಮದ್, ಜಿ. ಕೃಷ್ಣಪ್ಪ, ಟಿ.ಎಂ. ಶಹೀದ್ ತೆಕ್ಕೆಲ್, ಮಮತಾ ಗಟ್ಟಿ, ಸಾಲೆಟ್ ಪಿಂಟೋ, ಭರತ್ ಮುಂಡೋಡಿ, ಹಮೀದ್ ಕುತ್ತಮಟ್ಟೆ, ಕೆ.ಎಂ. ಮುಸ್ತಫ ಜನತಾ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಟಾರ್ ಸೇರಿದಂತೆ ಬ್ಲಾಕ್ ಹಾಗೂ ಜಿಲ್ಲಾ ಕಾಂಗ್ರೆಸ್‌ನ ವಿವಿಧ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಸುಳ್ಯದಿಂದ ಆರಂಭಗೊಂಡ ಪಾದಯಾತ್ರೆ ಪೈಚಾರ್, ಜಾಲ್ಲೂರು ಮೂಲಕ ಸಾಗಿದ್ದು, ಮಧ್ಯಾಹ್ನ ಕನಕಮಜಲು ತಲುಪಲಿದೆ. ಮಧ್ಯಾಹ್ನ ಭೋಜನದ ಬಳಿಕ ಯಾತ್ರೆ ಮುಂದುವರಿದು ಸಂಜೆ ಕುಂಬ್ರದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಪುತ್ತೂರು ಗಡಿ ಪೆರ್ನಾಜೆಗೆ ತಲುಪುವ ಸಂದರ್ಭದಲ್ಲಿ ಪುತ್ತೂರಿನ ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆಯನ್ನು ಸ್ವಾಗತಿಸಲಿದ್ದಾರೆ.

ಫೆ. 10ರಂದು ಬೆಳಿಗ್ಗೆ ಪಾದಯಾತ್ರೆ ಪುತ್ತೂರಿನಿಂದ ಕಬಕ ಮೂಲಕ ಮಾಣಿ ತಲುಪಲಿದ್ದು, ಸಂಜೆ ಮಾಣಿಯಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಫೆ. 11ರಂದು ಬೆಳಿಗ್ಗೆ ಮಾಣಿಯಿಂದ ಮಂಗಳೂರು ಅಡ್ಯಾರ್ ತಲುಪುವ ಪಾದಯಾತ್ರೆಗೆ ಸಂಜೆ ಸಾರ್ವಜನಿಕ ಸಭೆ ಆಯೋಜಿಸಲಾಗಿದೆ. ಫೆ. 12ರಂದು ಬೆಳಿಗ್ಗೆ ಅಡ್ಯಾರ್‌ನಿಂದ ಆರಂಭಗೊಳ್ಳುವ ಪಾದಯಾತ್ರೆ ಮುಲ್ಕಿಯಲ್ಲಿ ಸಮಾಪನಗೊಳ್ಳಲಿದೆ.

You may also like

Leave a Comment