Home ಕ್ರೈಂವಿಚಿತ್ರ ಚಿನ್ನ ಕಳ್ಳಸಾಗಣೆ: ಒಳಉಡುಪಿನಲ್ಲಿ 45ಲಕ್ಷ ಚಿನ್ನ ಅಡಗಿಸಿ ತಂದ ಆರೋಪಿ ಬಂಧನ!

ವಿಚಿತ್ರ ಚಿನ್ನ ಕಳ್ಳಸಾಗಣೆ: ಒಳಉಡುಪಿನಲ್ಲಿ 45ಲಕ್ಷ ಚಿನ್ನ ಅಡಗಿಸಿ ತಂದ ಆರೋಪಿ ಬಂಧನ!

Gold Worth ₹45 Lakh Smuggled in Underwear; Accused Arrested by Customs Officials

by Editor

ಗುಜರಾತ್‌, ಫೆ.09: ವಿಮಾನ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳು ಜಾರಿಯಲ್ಲಿದ್ದರೂ, ವಿದೇಶಗಳಿಂದ ಚಿನ್ನ ಕಳ್ಳಸಾಗಣೆ ಮಾಡುವ ದುಸ್ಸಾಹಸಗಳು ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ನುಂಗಿದ ಚಿನ್ನವನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದ ಪ್ರಕರಣಗಳಿಂದ ಹಿಡಿದು, ವಿಚಿತ್ರ ವಿಧಾನಗಳಲ್ಲಿ ಚಿನ್ನ ಅಡಗಿಸಿ ತರಲು ಯತ್ನಿಸುವವರ ತನಕ ಅನೇಕರು ಈಗಾಗಲೇ ಸಿಕ್ಕಿಬಿದ್ದಿದ್ದಾರೆ. ಆದರೂ ದುರಾಸೆಗೆ ತುತ್ತಾದ ಖದೀಮರು ದಿನವೂ ಹೊಸ ಹೊಸ ಮಾರ್ಗಗಳನ್ನು ಕಂಡುಕೊಂಡು ಚಿನ್ನ ಕಳ್ಳಸಾಗಣೆಗೆ ಯತ್ನಿಸುತ್ತಲೇ ಇದ್ದಾರೆ.

ಇದಕ್ಕೆ ಇತ್ತೀಚಿನ ಉದಾಹರಣೆ ಅಹ್ಮದಾಬಾದ್‌ನ ಅಹ್ಮದಾಬಾದ್ ವಿಮಾನ ನಿಲ್ದಾಣದಲ್ಲಿ ಬೆಳಕಿಗೆ ಬಂದಿದೆ. ದುಬೈನಿಂದ ಸ್ಪೈಸ್‌ಜೆಟ್ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕನೊಬ್ಬ ತನ್ನ ಒಳಉಡುಪಿನಲ್ಲೇ (ಚಡ್ಡಿ) ಪೇಸ್ಟ್ ರೂಪದಲ್ಲಿ ಚಿನ್ನ ಅಡಗಿಸಿಕೊಂಡು ಬಂದಿದ್ದಾನೆ. ಆರಂಭಿಕ ತಪಾಸಣೆಯಲ್ಲಿ ಆತ ತಪ್ಪಿಸಿಕೊಂಡಿದ್ದರೂ, ಆತನ ಅನುಮಾನಾಸ್ಪದ ವರ್ತನೆ ಕಸ್ಟಮ್ಸ್ ಅಧಿಕಾರಿಗಳ ಗಮನ ಸೆಳೆದಿದೆ. ವಿಚಾರಣೆಗೆ ಒಳಪಡಿಸಿ, ಆತ ಧರಿಸಿದ್ದ ಚಡ್ಡಿಯನ್ನು ಕತ್ತರಿ ಹಾಕಿ ಪರಿಶೀಲಿಸಿದಾಗ ಅಧಿಕಾರಿಗಳಿಗೆ ಬರೋಬ್ಬರಿ 45 ಲಕ್ಷ ರೂ. ಮೌಲ್ಯದ ಚಿನ್ನ ಪತ್ತೆಯಾಗಿದೆ.

ಮೇಲ್ನೋಟಕ್ಕೆ ಚಿನ್ನವು ಬಟ್ಟೆಯಂತೆಯೇ ಕಾಣಿಸುತ್ತಿದ್ದ ಕಾರಣ ತಕ್ಷಣಕ್ಕೆ ಅನುಮಾನ ಬರಲಿಲ್ಲ. ಆದರೆ ಪ್ರಯಾಣಿಕನ ವರ್ತನೆಯೇ ಪ್ರಕರಣವನ್ನು ಬಹಿರಂಗಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಡ್ಡಿಯೊಳಗಿನ ಚಿನ್ನ ಸೇರಿ, ಆತನಿಂದ ಒಟ್ಟು 96 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ವಿವರಗಳ ಪ್ರಕಾರ, ಒಳಉಡುಪಿನಲ್ಲಿ ಪೇಸ್ಟ್ ರೂಪದಲ್ಲಿದ್ದ ಚಿನ್ನವನ್ನು ರಾಸಾಯನಿಕ ಸಂಸ್ಕರಣೆಗೆ ಒಳಪಡಿಸಿದ ಬಳಿಕ 277.800 ಗ್ರಾಂ ತೂಕದ 24 ಕ್ಯಾರೆಟ್ ಶುದ್ಧ ಚಿನ್ನ ಲಭ್ಯವಾಗಿದೆ. ಇದರ ಮೌಲ್ಯ ಸುಮಾರು 44,33,688 ರೂ. ಆಗಿದೆ. ಜೊತೆಗೆ, ಪ್ರಯಾಣಿಕನ ಪರ್ಸ್‌ನಲ್ಲಿ ಜಾಣತನದಿಂದ ಮರೆಮಾಡಲಾಗಿದ್ದ ಎರಡು ಪೂರ್ಣ ಚಿನ್ನದ ಬಾರ್‌ಗಳು ಹಾಗೂ ಒಂದು ಕಟ್ ಬಾರ್ ಸೇರಿ 324.140 ಗ್ರಾಂ ತೂಕದ ಚಿನ್ನವೂ ಪತ್ತೆಯಾಗಿದ್ದು, ಅದರ ಮಾರುಕಟ್ಟೆ ಮೌಲ್ಯ 51,73,274 ರೂ. ಎಂದು ಅಂದಾಜಿಸಲಾಗಿದೆ.

ಈ ರೀತಿ ಒಬ್ಬ ಪ್ರಯಾಣಿಕನಿಂದ ಒಟ್ಟು 601.940 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಇಲಾಖೆ ವಶಪಡಿಸಿಕೊಂಡಿದ್ದು, ಅದರ ಒಟ್ಟು ಮಾರುಕಟ್ಟೆ ಮೌಲ್ಯ 96,06,962 ರೂ. ಆಗಿದೆ. 1962ರ ಕಸ್ಟಮ್ಸ್ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಚಿನ್ನ ಸಾಗಣೆ ಜಾಲದ ಹಿಂದಿರುವ ಇತರರು ಯಾರು, ಈ ಚಿನ್ನವನ್ನು ಯಾರಿಗೆ ತಲುಪಿಸಬೇಕಿತ್ತು ಎಂಬುದರ ಕುರಿತು ಹೆಚ್ಚಿನ ತನಿಖೆ ಆರಂಭಿಸಲಾಗಿದೆ ಎಂದು ಅಹ್ಮದಾಬಾದ್ ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

 

You may also like

Leave a Comment