
ಕುಣಿಗಲ್. ಫೆ.09: ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಎಡೆಯೂರಿನಲ್ಲಿ ವಿಚ್ಛೇದನ ನೀಡದೆ ಎರಡನೇ ಮದುವೆಗೆ ಮುಂದಾಗಿದ್ದ ಗಂಡನ ಮದುವೆಯನ್ನು ಸ್ವತಃ ಪತ್ನಿಯೇ ಕಲ್ಯಾಣಮಂಟಪಕ್ಕೆ ನುಗ್ಗಿ ತಡೆದ ಘಟನೆ ಭಾನುವಾರ ನಡೆದಿದೆ. ಈ ವೇಳೆ ವಕೀಲರು ಹಾಗೂ ಪೊಲೀಸರ ಸಮ್ಮುಖದಲ್ಲೇ ಮದುವೆ ನಿಲ್ಲಿಸಲ್ಪಟ್ಟಿದ್ದು, ಸ್ಥಳದಲ್ಲಿ ಕೆಲಕಾಲ ಗೊಂದಲ ಉಂಟಾಯಿತು.
ಬೆಂಗಳೂರಿನ ರಾಜರಾಜೇಶ್ವರಿನಗರ ನಿವಾಸಿ ಹರಿಪ್ರಸಾದ್ ತನ್ನ ಪತ್ನಿ ಲೇಪಾಕ್ಷಿಗೆ ವಿಚ್ಛೇದನ ನೀಡದೆ, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ನಿಟ್ಟೂರು ಗ್ರಾಮದ ಯುವತಿಯೊಬ್ಬಳೊಂದಿಗೆ ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ. ವಿವಾಹದ ದಿನವೇ ಈ ವಿಷಯ ತಿಳಿದ ಲೇಪಾಕ್ಷಿ ವಕೀಲರು ಹಾಗೂ ಪೊಲೀಸರೊಂದಿಗೆ ಎಡೆಯೂರಿನ ಕಲ್ಯಾಣಮಂಟಪಕ್ಕೆ ಆಗಮಿಸಿ ಮದುವೆಯನ್ನು ತಡೆದಿದ್ದಾರೆ.
ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಹರಿಪ್ರಸಾದ್ (ಹರೀಶ್ ಪ್ರಸಾದ್) ಸುಮಾರು 11 ವರ್ಷಗಳ ಹಿಂದೆ ತನ್ನ ಬಾಲ್ಯದ ಗೆಳತಿ ಲೇಪಾಕ್ಷಿಯನ್ನು ವಿವಾಹವಾಗಿದ್ದಾನೆ. ಆ ವೇಳೆ ಲೇಪಾಕ್ಷಿಗೆ 18 ವರ್ಷ ಪೂರ್ಣವಾಗಿರಲಿಲ್ಲ. ಬಳಿಕ ಆಕೆ ಪ್ರಾಪ್ತವಯಸ್ಕಳಾದ ನಂತರ ಬಂಧು-ಮಿತ್ರರ ಸಮ್ಮುಖದಲ್ಲಿ ಮದುವೆ ನೆರವೇರಿಸಿ, ದಂಪತಿ 10 ವರ್ಷಗಳ ಕಾಲ ಸಂಸಾರ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ದಿನಕಳೆದಂತೆ ಗಂಡನ ಮನೆಯವರಿಂದ ಮಾನಸಿಕ ಹಾಗೂ ದೈಹಿಕ ಹಿಂಸೆ ಎದುರಿಸುತ್ತಿದ್ದೆನೆ ಹಾಗೂ ಹರಿಪ್ರಸಾದ್‌ಗೆ ಅಕ್ರಮ ಸಂಬಂಧಗಳಿವೆ ಎಂದು ಲೇಪಾಕ್ಷಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪತ್ನಿಯೊಂದಿಗೆ ಪುನಃ ಜೀವನ ನಡೆಸುವುದಾಗಿ ಹರಿಪ್ರಸಾದ್ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಆದರೆ, ಪತ್ನಿಗೆ ತಿಳಿಯದಂತೆ ಮಂಡ್ಯದ ಮಳವಳ್ಳಿ ತಾಲ್ಲೂಕಿನ ನಿಟ್ಟೂರು ಗ್ರಾಮದ ಪುಣ್ಯಶ್ರೀ ಎಂಬ ಯುವತಿಯೊಂದಿಗೆ ಎರಡನೇ ಮದುವೆಗೆ ಮುಂದಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಮಂಗಳಸೂತ್ರ ಕಟ್ಟಲು ಸಿದ್ಧವಾಗಿದ್ದ ಕ್ಷಣದಲ್ಲೇ ಕಲ್ಯಾಣಮಂಟಪಕ್ಕೆ ನುಗ್ಗಿದ ಲೇಪಾಕ್ಷಿ ಮದುವೆಯನ್ನು ತಡೆದಿದ್ದು, ಬಳಿಕ ಪೊಲೀಸರು ಹರಿಪ್ರಸಾದ್‌ನನ್ನು ಠಾಣೆಗೆ ಕರೆದೊಯ್ದಿದ್ದಾರೆ. ಈ ನಡುವೆ ಮದುವೆಯಾಗಬೇಕಿದ್ದ ಯುವತಿಯ ತಾಯಿಯೂ ಅಮೃತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹರಿಪ್ರಸಾದ್ ತನ್ನ ಜಾತಿ ಹಾಗೂ ಮೊದಲ ಮದುವೆಯ ವಿಷಯವನ್ನು ಮುಚ್ಚಿಟ್ಟು ಮದುವೆಗೆ ಒಪ್ಪಿಸಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ದೂರುದಾರರು ಹಾಗೂ ಆರೋಪಿಗಳು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿರುವುದರಿಂದ, ದಾಖಲಾಗಿರುವ ಎರಡೂ ದೂರುಗಳನ್ನು ಅಲ್ಲಿಗೆ ವರ್ಗಾಯಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.