ಜಾಲ್ಸೂರು, ಫೆ.10:ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಸಂಪ್ರದಾಯಬದ್ಧವಾಗಿ ನಡೆಯುವ ವರ್ಷಾವಧಿ ಜಾತ್ರೋತ್ಸವ ಹಾಗೂ ಪ್ರತಿಷ್ಠಾ ದಿನಾಚರಣೆ ಫೆಬ್ರವರಿ 18ರಿಂದ 20ರವರೆಗೆ ಜರುಗಲಿದೆ. ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳವರ ಮಾರ್ಗದರ್ಶನದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರು, ರಕೇಶ್ವರಿ, ವನಶಾಸ್ತಾವು, ನಾಗದೇವರು ಸೇರಿದಂತೆ ಪರಿವಾರ ದೈವಗಳ ಪೂಜಾ ಕೈಂಕರ್ಯಗಳು ನಡೆಯಲಿವೆ.ಜಾತ್ರೋತ್ಸವಕ್ಕೆ ಪೂರ್ವಭಾವಿಯಾಗಿ
ಫೆ.12ರಂದು ಬೆಳಿಗ್ಗೆ ಮೂಹೂರ್ತದ ಗೊನೆ ಕಡಿಯುವ ಮೂಲಕ ವಿಧಿವಿಧಾನಗಳಿಗೆ ಚಾಲನೆ ನೀಡಲಾಗುತ್ತದೆ.
ಫೆ.18ರಂದು ಬೆಳಿಗ್ಗೆ ದೇವಾಲಯದಲ್ಲಿ ಶ್ರೀ ಸುಬ್ರಹ್ಮಣ್ಯ ಹವನದ ಸಾಮೂಹಿಕ ಪ್ರಾರ್ಥನೆ ನಡೆಯಲಿದ್ದು, ಬಳಿಕ ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರ, ಜಾಲ್ಸೂರಿನ ಶ್ರೀ ಗುರುರಾಘವೇಂದ್ರ ಸ್ವಾಮಿ ಭಜನಾ ಮಂದಿರ, ಸೋಣಂಗೇರಿ ಶ್ರೀಕೃಷ್ಣ ಭಜನಾ ಮಂದಿರ ಸೇರಿದಂತೆ ವಿವಿಧ ಭಜನಾ ಮಂದಿರಗಳಿಂದ ಹಸಿರುವಾಣಿ ಮೆರವಣಿಗೆ ದೇವರ ಸನ್ನಿಧಿಗೆ ಆಗಮಿಸಲಿದೆ. ಮಧ್ಯಾಹ್ನ ಹವನದ ಪೂರ್ಣಾಹುತಿ ನಂತರ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಮಹಾಪೂಜೆ ನೆರವೇರಲಿದೆ.
ಫೆ.11ರಂದು ದೇವಾಲಯದ ಮುಂಭಾಗದ ಮೈದಾನದಲ್ಲಿ ವಿನೋಬನಗರದ ಶ್ರೀಮತಿ ಪದ್ಮಾವತಿ ಉಪೇಂದ್ರ ಕಾಮತ್ ಮತ್ತು ಕುಟುಂಬದವರ ಸೇವಾ ರೂಪದಲ್ಲಿ ನಿರ್ಮಿತ ನೂತನ ಅಶ್ವತ್ಥ ಕಟ್ಟೆಯ ಸಮರ್ಪಣೆ, ನೂತನ ಸೇವಾ ಕೌಂಟರ್ ಹಾಗೂ ಕಾರ್ಯಾಲಯದ ಲೋಕಾರ್ಪಣೆ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಫೆ.10ರಂದು ರಾತ್ರಿ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ವಾಸ್ತು ಸಂಬಂಧಿತ ಹೋಮ-ಪೂಜೆಗಳು, ಅನ್ನಸಂತರ್ಪಣೆ ಜರುಗಲಿದೆ.
ಫೆ.11ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಅಶ್ವತ್ಥ ಉಪನಯನ ವಿವಾಹ ಸಂಸ್ಕಾರ ಹಾಗೂ ಮಹಾಪೂಜೆ ನಡೆಯಲಿದ್ದು, ಬೆಳಿಗ್ಗೆ 10.30ಕ್ಕೆ ‘ಶಾಂತಿರಾಮ’ ಬಳಗ ಕುಂದಾಪುರ ಇವರಿಂದ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಜೆ-ರಾತ್ರಿ ದೇವರ ಮಹಾಪೂಜೆ, ಅನ್ನಸಂತರ್ಪಣೆ ಹಾಗೂ ಸ್ಥಳೀಯರಿಂದ ನೃತ್ಯ ವೈವಿಧ್ಯ ನಡೆಯಲಿದೆ.
ಫೆ.19ರಂದು ಬೆಳಿಗ್ಗೆ ಗಣಪತಿ ಹವನ, ನವಕಲಶಾಭಿಷೇಕ, ಪರಿವಾರ ದೇವರಿಗೆ ತಂಬಿಲ, ಮಧ್ಯಾಹ್ನ ತುಲಾಭಾರ ಸೇವೆ, ಮಹಾಪೂಜೆ, ಪಲ್ಲಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ದೀಪಾರಾಧನೆ, ತಾಯಂಬಕ, ರಾತ್ರಿ ಉತ್ಸವ ಬಲಿ, ವಸಂತ ಕಟ್ಟೆಪೂಜೆ, ನೃತ್ಯಬಲಿ, ಪಟ್ಟಣ ಸವಾರಿ, ಅಶ್ವತ್ಥ ಕಟ್ಟೆಪೂಜೆ ಬೆಡಿಸೇವೆ ಹಾಗೂ ಅನ್ನಸಂತರ್ಪಣೆ ಜರುಗಲಿದೆ.
ಫೆ.20ರಂದು ಬೆಳಿಗ್ಗೆ ಉತ್ಸವ ಬಲಿ, ದರ್ಶನಬಲಿ, ಬಟ್ಟಲುಕಾಣಿಕೆ, ರಾಜಾಂಗಣ ಪ್ರಸಾದ, ಮಹಾಪೂಜೆ, ಸಂಪ್ರೋಕ್ಷಣೆ, ಮಂತ್ರಾಕ್ಷತೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಶ್ರೀ ಸುಬ್ರಹ್ಮಣ್ಯ ದೇವರಿಗೆ ರಂಗಪೂಜೆ ಹಾಗೂ ಮಹಾಪೂಜೆ ನೆರವೇರಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಜಯಕುಮಾರ್ ಕೊಡಿಯಾಲಬೈಲು ನಿರ್ದೇಶನದಲ್ಲಿ ಶಶಿರಾಜ್ ರಾವ್ ಕಾವೂರು ಬಳಗದವರಿಂದ ತುಳು ನಾಟಕ ‘ಛತ್ರಪತಿ ಶಿವಾಜಿ’ ಪ್ರದರ್ಶನಗೊಳ್ಳಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನ ಸಮಿತಿ ಕೋರಿದೆ.