ಮಂಗಳೂರು, ಫೆ. 10: ರಾಜ್ಯದ ವಿವಿಧ ಗ್ರಾಮ ಪಂಚಾಯಿತಿಗಳ ಅವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಚುನಾವಣೆ ನಡೆದು ಹೊಸ ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆ ಪೂರ್ಣಗೊಳ್ಳುವವರೆಗೆ ಆಡಳಿತ ಕಾರ್ಯ ನಿರ್ವಹಣೆಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡುವಂತೆ ಸರ್ಕಾರ ನಿರ್ದೇಶನ ನೀಡಿದೆ.
ಸರ್ಕಾರದ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಪತ್ರ ಸಂಖ್ಯೆ ಗ್ರಾಅಪಂ 1003 ಗ್ರಾಪಂಅ 2025 ದಿನಾಂಕ 16-01-2026ರಂತೆ, ಸಂವಿಧಾನದ ಅನುಚ್ಛೇದ 243(6) ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ–1993ರ ಪ್ರಕರಣ 41 ಮತ್ತು 42ರ ಅನ್ವಯ ಗ್ರಾಮ ಪಂಚಾಯಿತಿಗಳ ಅವಧಿ ಮೊದಲ ಸಭೆ ನಡೆದ ದಿನಾಂಕದಿಂದ ಐದು ವರ್ಷಗಳವರೆಗೆ ಅಸ್ತಿತ್ವದಲ್ಲಿರುತ್ತದೆ. ಈ ಅವಧಿ ಪೂರ್ಣಗೊಂಡ ಬಳಿಕ ಪಂಚಾಯಿತಿಗಳ ಕಾರ್ಯಾವಧಿ ಮುಕ್ತಾಯಗೊಳ್ಳಲಿದೆ.
ಈ ಹಿನ್ನೆಲೆಯಲ್ಲಿ 2020–2025ರ ಅವಧಿಗೆ ರಚನೆಯಾಗಿದ್ದ ರಾಜ್ಯದ ಅನೇಕ ಗ್ರಾಮ ಪಂಚಾಯಿತಿಗಳ ಅವಧಿ 2026ರ ಜನವರಿ, ಫೆಬ್ರವರಿ, ಮಾರ್ಚ್ ಹಾಗೂ ಮುಂದಿನ ತಿಂಗಳುಗಳಲ್ಲಿ ಮುಕ್ತಾಯಗೊಳ್ಳಲಿದೆ. 2026–2031ರ ಅವಧಿಗೆ ಚುನಾವಣೆ ನಡೆದು ಹೊಸ ಸದಸ್ಯರು ಅಧಿಕಾರ ಸ್ವೀಕರಿಸುವವರೆಗೆ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ–1993ರ ಪ್ರಕರಣ 8(ii)ರ ಅನ್ವಯ ಜಿಲ್ಲಾಧಿಕಾರಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡುವ ಅಧಿಕಾರವಿದೆ.
ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಮುಲ್ಕಿ, ಉಳ್ಳಾಲ, ಮೂಡಬಿದ್ರೆ, ಬಂಟ್ವಾಳ, ಪುತ್ತೂರು, ಸುಳ್ಯ, ಕಡಬ ಹಾಗೂ ಬೆಳ್ತಂಗಡಿ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ಅವಧಿ ಮುಕ್ತಾಯಗೊಂಡ ಹಾಗೂ ಮುಕ್ತಾಯಗೊಳ್ಳಲಿರುವ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಆದೇಶಿಸಲಾಗಿದೆ.
ನೇಮಕಗೊಂಡ ಆಡಳಿತಾಧಿಕಾರಿಗಳು ಸಂಬಂಧಿಸಿದ ಗ್ರಾಮ ಪಂಚಾಯಿತಿಗಳ ದಿನನಿತ್ಯದ ಆಡಳಿತ ಕಾರ್ಯಗಳನ್ನು ನಿರ್ವಹಿಸಿ, ಪಂಚಾಯತ್‌ಗಳ ಹಿತದೃಷ್ಟಿಯಿಂದ ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕು. ಅವರು ಪ್ರಭಾರ ವಹಿಸಿಕೊಂಡ ದಿನಾಂಕದಿಂದಲೇ ಕರ್ತವ್ಯ ನಿರ್ವಹಣೆ ಆರಂಭಿಸಿ, ಪ್ರಭಾರ ವಹಿಸಿಕೊಂಡ ಬಗ್ಗೆ ಸಂಬಂಧಿಸಿದ ಕಚೇರಿಗೂ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೂ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಈ ಆದೇಶದ ಪ್ರತಿಯನ್ನು ಸರ್ಕಾರದ ಕಾರ್ಯದರ್ಶಿ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ), ರಾಜ್ಯ ಚುನಾವಣಾ ಆಯೋಗ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಹಾಯಕ ಆಯುಕ್ತರು, ಎಲ್ಲಾ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ತಹಶೀಲ್ದಾರರು ಹಾಗೂ ಸಂಬಂಧಪಟ್ಟ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮಾಹಿತಿಗಾಗಿ ಮತ್ತು ಅಗತ್ಯ ಕ್ರಮಕ್ಕಾಗಿ ಕಳುಹಿಸಲಾಗಿದೆ.