ಪುಲ್ವಾಮ, ಫೆಬ್ರವರಿ 14:ಭಾರತದ ಇತಿಹಾಸದಲ್ಲಿ ಎಂದಿಗೂ ಮರೆಯಲಾಗದ ಕರಾಳ ದಿನವೆಂದೇ ಗುರುತಿಸಿಕೊಂಡಿರುವ ಪುಲ್ವಾಮ ಉಗ್ರ ದಾಳಿ, ದೇಶದ ಭದ್ರತಾ ವ್ಯವಸ್ಥೆ ಮತ್ತು ಜನರ ಮನಸ್ಸಿನಲ್ಲಿ ಆಳವಾದ ಗಾಯ ಮೂಡಿಸಿದ ಘಟನೆ. 2019ರ ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೋರಾ ಸಮೀಪ ಈ ಭೀಕರ ಆತ್ಮಹತ್ಯಾ ದಾಳಿ ನಡೆದಿತ್ತು.
ಆ ದಿನ ಜಮ್ಮುವಿನಿಂದ ಶ್ರೀನಗರದತ್ತ ಸಾಗುತ್ತಿದ್ದ CRPF ಯೋಧರ ದೊಡ್ಡ ವಾಹನ ದಂಡಿನಲ್ಲಿ ಸುಮಾರು 78 ವಾಹನಗಳಲ್ಲಿ 2500ಕ್ಕೂ ಹೆಚ್ಚು ಯೋಧರು ಪ್ರಯಾಣಿಸುತ್ತಿದ್ದರು. ಮಧ್ಯಾಹ್ನ ವೇಳೆಯಲ್ಲಿ, ಸ್ಪೋಟಕಗಳಿಂದ ತುಂಬಿದ ಕಾರಿನಲ್ಲಿ ಬಂದ ಆತ್ಮಹತ್ಯಾ ಉಗ್ರನು, ಯೋಧರು ಸಾಗುತ್ತಿದ್ದ ಬಸ್ಸಿಗೆ ನೇರವಾಗಿ ಡಿಕ್ಕಿ ಹೊಡೆಸಿದನು. ಕ್ಷಣಾರ್ಧದಲ್ಲಿ ಸಂಭವಿಸಿದ ಭೀಕರ ಸ್ಫೋಟದಿಂದ ಒಂದು ಬಸ್ ಸಂಪೂರ್ಣ ನಾಶವಾಗಿ, 40 ಮಂದಿ ಧೀರ ಯೋಧರು ಸ್ಥಳದಲ್ಲೇ ಶಹೀದರಾದರು.
ಹಲವರು ಗಂಭೀರವಾಗಿ ಗಾಯಗೊಂಡರು.
ಈ ದಾಳಿಯ ಹೊಣೆಗಾರಿಕೆಯನ್ನು ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಜೈಷ್-ಇ-ಮೊಹಮ್ಮದ್ ಹೊತ್ತುಕೊಂಡಿತು. ಈ ಘಟನೆ ದೇಶಾದ್ಯಂತ ಆಕ್ರೋಶ ಮತ್ತು ದುಃಖಕ್ಕೆ ಕಾರಣವಾಯಿತು. ಸಾವಿರಾರು ಜನರು ಶಹೀದ ಯೋಧರ ಅಂತಿಮ ದರ್ಶನಕ್ಕಾಗಿ ಸೇರಿ ಕಣ್ಣೀರಿನ ವಿದಾಯ ಹೇಳಿದರು.
ಉಗ್ರರ ಉದ್ದೇಶ ಭಾರತದ ಭದ್ರತಾ ಪಡೆಗಳನ್ನು ಗುರಿಯಾಗಿಸುವುದು, ದೇಶದಲ್ಲಿ ಭಯ ಮತ್ತು ಅಶಾಂತಿ ಸೃಷ್ಟಿಸುವುದು ಮತ್ತು ಜಮ್ಮು-ಕಾಶ್ಮೀರ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುವುದಾಗಿತ್ತು. ಈ ದಾಳಿ ಪೂರ್ವ ಯೋಜಿತ ಆತ್ಮಹತ್ಯಾ ಮಿಷನ್ ಆಗಿದ್ದು, ದೇಶದ ಭದ್ರತೆಗೆ ದೊಡ್ಡ ಸವಾಲಾಗಿ ಪರಿಣಮಿಸಿತು.
ಈ ಭೀಕರ ದಾಳಿಗೆ ಪ್ರತಿಯಾಗಿ 2019ರ ಫೆಬ್ರವರಿ 26ರಂದು ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಾಕೋಟ್ ಪ್ರದೇಶದಲ್ಲಿದ್ದ ಉಗ್ರರ ತರಬೇತಿ ಶಿಬಿರಗಳ ಮೇಲೆ ಏರ್ ಸ್ಟ್ರೈಕ್ ನಡೆಸಿ, ಉಗ್ರರಿಗೆ ತಕ್ಕ ಉತ್ತರ ನೀಡಿತು.
ಪುಲ್ವಾಮ ದಾಳಿ ಕೇವಲ ಒಂದು ಉಗ್ರ ದಾಳಿ ಮಾತ್ರವಲ್ಲ, ಅದು ದೇಶದ 40 ಧೀರ ಯೋಧರ ತ್ಯಾಗದ ಸಂಕೇತವಾಗಿದೆ. ಪ್ರತಿ ವರ್ಷ ಫೆಬ್ರವರಿ 14ರಂದು ದೇಶದಾದ್ಯಂತ ಜನರು ಈ ಧೀರ ಯೋಧರನ್ನು ಸ್ಮರಿಸಿ ಗೌರವ ಸಲ್ಲಿಸುತ್ತಾರೆ.
ದೇಶದ ರಕ್ಷಣೆಗಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಆ 40 ಯೋಧರು ಎಂದಿಗೂ ಅಮರರು. ಅವರ ಬಲಿದಾನವನ್ನು ಭಾರತ ಎಂದಿಗೂ ಮರೆಯುವುದಿಲ್ಲ.