ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಂದ ನ್ಯಾಯಾಲಯಕ್ಕೆ ನಿರಂತರವಾಗಿ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ನಿನ್ನೆ ಮೂವರು ಆರೋಪಿಗಳು ಹೊಸ ಅರ್ಜಿ ಸಲ್ಲಿಸಿದ್ದು, ತನಿಖೆಯ ಪ್ರಕ್ರಿಯೆ ಕುರಿತು ಗಂಭೀರ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದಾರೆ.
ಆರೋಪಿಗಳ ಪರ ವಕೀಲರು ಸಲ್ಲಿಸಿದ ಅರ್ಜಿಯಲ್ಲಿ, ತಮ್ಮ ಮೊಬೈಲ್ ಫೋನ್‌ಗಳನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ವಶಕ್ಕೆ ಪಡೆಯಲಿಲ್ಲ. ಬೇರೆ ಸ್ಥಳದಲ್ಲಿ ವಶಕ್ಕೆ ಪಡೆದು, ಅದನ್ನು ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ವಶಕ್ಕೆ ಪಡೆದಂತೆ ದಾಖಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಇನ್ನೂ, ದೋಷಾರೋಪ ಪಟ್ಟಿ ಸಲ್ಲಿಕೆಯ ವೇಳೆ ದಾಖಲಾದ ಫೋಟೋಗಳಲ್ಲಿ ವೈಟ್ ಕಲರ್ ಟೈಲ್ಸ್ ಕಾಣಿಸುತ್ತವೆ. ಆದರೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಹಳೆಯ ಮಾದರಿಯ ಮೊಜಾಕ್ ನೆಲವಿದೆ. ಈ ವೈಷಮ್ಯವು ಪ್ರಕರಣದ ತನಿಖೆ ದಾರಿ ತಪ್ಪಿಸುವ ಪ್ರಯತ್ನವಾಗಿರಬಹುದು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆ, ಪ್ರಕರಣದ ನಿಖರತೆ ಪರಿಶೀಲಿಸಲು ಖುದ್ದಾಗಿ ನ್ಯಾಯಾಧೀಶರು ಜೈಲಿಗೆ ಭೇಟಿ ನೀಡಬೇಕು. ಜೊತೆಗೆ, ಸಂಬಂಧಿತ ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ತಕ್ಷಣ ವಶಕ್ಕೆ ಪಡೆಯಬೇಕು ಹಾಗೂ ಯಾವುದೇ ಬದಲಾವಣೆ ಅಥವಾ ನಾಶವಾಗದಂತೆ ಅಗತ್ಯ ಎಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್ ಗಮನಕ್ಕೆ ತಂದಿದ್ದಾರೆ.
ಅರ್ಜಿಯನ್ನು ಸ್ವೀಕರಿಸಿದ ನ್ಯಾಯಾಲಯ ವಿಚಾರಣೆಯನ್ನು ನಿಗದಿ ಮಾಡಿದ್ದು, ಮುಂದಿನ ವಿಚಾರಣೆ ನಡೆಯುವ ತನಕ ಸಂಬಂಧಿತ ಸಿಸಿಟಿವಿ ದೃಶ್ಯಾವಳಿಗಳನ್ನು ನಾಶ ಮಾಡದಂತೆ ಪೊಲೀಸರಿಗೆ ಸೂಚನೆ ನೀಡಿದೆ.
ಪ್ರಕರಣದ ಮುಂದಿನ ಬೆಳವಣಿಗೆಗಳತ್ತ ಎಲ್ಲರ ಗಮನ ಕೇಂದ್ರೀಕೃತವಾಗಿದೆ.
ಈ ಸುದ್ದಿ ಓದಿದ್ದೀರಾ: