ಅಲ್ಪಾಯುಷಿ ಭವಿಷ್ಯ ಭೀತಿ? ಜ್ಯೋತಿಷಿ ಮಾತಿಗೆ ಹೆದರಿ ಯುವತಿ ಆತ್ಮಹತ್ಯೆ
ಬೆಂಗಳೂರು: ಜ್ಯೋತಿಷಿ ಹೇಳಿದ ಭವಿಷ್ಯವೇ ಯುವತಿಯ ಜೀವ ಕಸಿದುಕೊಂಡಿತೇ ಎಂಬ ಅನುಮಾನ ಹುಟ್ಟಿಸುವ ಹೃದಯವಿದ್ರಾವಕ ಘಟನೆ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಎಂಇಐ ಲೇಔಟ್‌ನಲ್ಲಿ ನಡೆದಿದೆ.
29 ವರ್ಷದ ವಿದ್ಯಾಜ್ಯೋತಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ. ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಅವರು ಸದ್ಯ ವರ್ಕ್ ಫ್ರಂ ಹೋಮ್ ಮೂಲಕ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಮಾಹಿತಿಯ ಪ್ರಕಾರ, ಕೆಲ ದಿನಗಳ ಹಿಂದೆ ಜ್ಯೋತಿಷಿಯೊಬ್ಬರು ವಿದ್ಯಾಜ್ಯೋತಿಗೆ “ಅಲ್ಪಾಯುಷಿ” ಎಂದು ಭವಿಷ್ಯ ನುಡಿದಿದ್ದರು ಎನ್ನಲಾಗಿದೆ. ಈ ಮಾತಿನಿಂದ ಆತಂಕಗೊಂಡ ಕುಟುಂಬಸ್ಥರು ಮಗಳ ಮನಸ್ಸಿಗೆ ಧೈರ್ಯ ನೀಡಲು ಹಾಗೂ ಶುಭವಾಗಲಿ ಎಂಬ ಉದ್ದೇಶದಿಂದ ಅವಳ ಆಸೆಯಂತೆ ಎಲ್ಲವನ್ನೂ ನೆರವೇರಿಸುತ್ತಿದ್ದರು. ಕೊಡಗು ಮೂಲದ ಯುವಕನೊಂದಿಗೆ ಪ್ರೀತಿಯಲ್ಲಿದ್ದ ವಿದ್ಯಾಳ ಮದುವೆಗೆ ಎರಡೂ ಕುಟುಂಬಗಳು ಸಹ ಒಪ್ಪಿಗೆ ಸೂಚಿಸಿದ್ದವು.
ಜ್ಯೋತಿಷಿಯ ಸಲಹೆಯಂತೆ ಮನೆದಲ್ಲಿ 9 ದಿನಗಳ ವಿಶೇಷ ಪೂಜೆ ಕೂಡ ಆಯೋಜಿಸಲಾಗಿತ್ತು. ಕೊನೆಯ ದಿನ ಮಾರಮ್ಮ ದೇವಿಗೆ ತಾಳಿ ಅರ್ಪಿಸುವಂತೆ ಸೂಚನೆ ನೀಡಲಾಗಿದ್ದು, ಅದರ ಎಲ್ಲಾ ಸಿದ್ಧತೆಗಳು ನಡೆದಿದ್ದವು. ಪೂಜೆ ದಿನ ಊಟದ ನಂತರ ವಿದ್ಯಾ ತನ್ನ ಕೊಠಡಿಗೆ ತೆರಳಿದ್ದಳು. ಸಂಜೆ ತಾಯಿ ಕರೆಯುತ್ತಿದ್ದರೂ ಹೊರಬರದಿದ್ದರಿಂದ ಕೆಲಸದಲ್ಲಿ ನಿರತರಾಗಿರಬಹುದು ಎಂದು ಮನೆಯವರು ಭಾವಿಸಿದ್ದರು.
ಆದರೆ ರಾತ್ರಿ ಸುಮಾರು 8 ಗಂಟೆ ವೇಳೆಗೆ ದೇವಸ್ಥಾನಕ್ಕೆ ಹೋಗಲು ಕರೆದಾಗ ಬಾಗಿಲು ತೆರೆಯದೇ ಇದ್ದುದರಿಂದ ಅನುಮಾನಗೊಂಡ ಕುಟುಂಬಸ್ಥರು ಕಿಟಕಿಯಿಂದ ನೋಡಿದಾಗ ವಿದ್ಯಾಜ್ಯೋತಿ ನೇಣುಬಿಗಿದುಕೊಂಡಿರುವುದು ಕಂಡುಬಂದಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.