ಈಶ್ವರಮಂಗಲ–ಮೇನಾಲ ರಸ್ತೆ ದುಸ್ಥಿತಿ, ಲಾರಿ ಸಿಲುಕಿದ ಘಟನೆ!
ನಡು ರೋಡಲ್ಲಿ ಗುಂಡಿ ಮಾಡಿ ಕೈ ಬಿಟ್ಟ ಟೆಂಡರ್‌ದಾರರು..
ಈಶ್ವರಮಂಗಲದಿಂದ ಮೇನಾಲ ಕಡೆಗೆ ಹೋಗುವ ರಸ್ತೆಯ ಮಧ್ಯ ಭಾಗದಲ್ಲಿ ನಿರ್ಲಕ್ಷ್ಯದಿಂದ ಮಾಡಲ್ಪಟ್ಟ ಕಾಮಗಾರಿ ಇದೀಗ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಟೆಂಡರ್ ಪಡೆದ ಗುತ್ತಿಗೆದಾರರು ರಸ್ತೆ ಕಾಮಗಾರಿಯನ್ನು ಅರ್ಧದಲ್ಲೇ ಬಿಟ್ಟು,ಮರಣಗುಂಡಿಯನ್ನು ಮಾಡಿ ಬಿಟ್ಟು ಹೋಗಿರುವುದರಿಂದ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ.
ರಸ್ತೆಯ ಮಣ್ಣು ತೆಗೆದು ಅರ್ಧ ಕೆಲಸ ಮಾಡಿರುವ ಪರಿಣಾಮ, ದಾರಿಯ ಮಧ್ಯದಲ್ಲಿ ದೊಡ್ಡ ಗುಂಡಿಗಳು ಹಾಗೂ ಕೆಸರು ಉಂಟಾಗಿವೆ. ಇದೇ ವೇಳೆ ಇಂದು ಒಂದು ಲಾರಿ ರಸ್ತೆ ಗುಂಡಿಯ ಮಧ್ಯದಲ್ಲೇ ಕೆಳಗೆ ಇಳಿದು ಸಿಲುಕಿದ ಘಟನೆ ಸಂಭವಿಸಿದೆ. ರಸ್ತೆಯ ಕೆಳಭಾಗದಲ್ಲಿ ನೀರಿನ ಪೈಪ್‌ಲೈನ್ ಇರುವುದರಿಂದ ಪರಿಸ್ಥಿತಿ ಇನ್ನಷ್ಟು ಅಪಾಯಕಾರಿಯಾಗಿದೆ.
ಈ ಭಾಗದ ಎರಡೂ ಬದಿಗಳಲ್ಲೂ ತೋಟಗಳಿದ್ದು, ವಾಹನ ಸಂಚಾರಕ್ಕೆ ಇದು ಪ್ರಮುಖ ರಸ್ತೆ ಆಗಿದೆ. ಆದರೆ ಕಾಮಗಾರಿಯ ಮೇಲ್ವಿಚಾರಣೆ ಮಾಡಬೇಕಾದ ಪಂಚಾಯತ್ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ಸ್ಥಳೀಯರು ಹೇಳುವಂತೆ, ರಸ್ತೆ ಕಾಮಗಾರಿ ಆರಂಭಿಸಿದ ನಂತರ ಗುತ್ತಿಗೆದಾರರು ಕೆಲಸವನ್ನು ಪೂರ್ಣಗೊಳಿಸದೇ ಮಧ್ಯದಲ್ಲೇ ಬಿಟ್ಟು ಹೋಗಿರುವುದರಿಂದ ಜನರಿಗೆ ದಿನನಿತ್ಯ ಸಂಚಾರದಲ್ಲಿ ತೊಂದರೆ ಉಂಟಾಗಿದೆ. ಯಾವುದೇ ಸುರಕ್ಷತಾ ಕ್ರಮಗಳನ್ನೂ ಕೈಗೊಳ್ಳದೇ ರಸ್ತೆಯನ್ನು ಹಾಗೆಯೇ ಬಿಟ್ಟು ಹೋಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಥಳೀಯರು ತಕ್ಷಣವೇ ಈ ರಸ್ತೆಯನ್ನು ಸರಿಪಡಿಸಿ ಸುರಕ್ಷಿತ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ಪಂಚಾಯತ್ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆಗೆ ಆಗ್ರಹಿಸಿದ್ದಾರೆ.