ದುಗ್ಗಲಡ್ಕ ಶ್ರೀ ದುಗ್ಗಲಾಯ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ: ಮಾರ್ಚ್ 18ರಿಂದ ಸಾಂಸ್ಕೃತಿಕ ಸಂಭ್ರಮ
ದುಗ್ಗಲಡ್ಕ: ಇಲ್ಲಿನ ನಡುಬೆಟ್ಟಿನ ಕಾರಣಿಕ ಶಕ್ತಿ ಶ್ರೀ ದುಗ್ಗಲಾಯ ದೈವಸ್ಥಾನದಲ್ಲಿ ಮಾರ್ಚ್ 18 ರಿಂದ 21 ರವರೆಗೆ ಪ್ರತಿಷ್ಠಾ ವಾರ್ಷಿಕೋತ್ಸವವು ಅತ್ಯಂತ ಸಡಗರ ಸಂಭ್ರಮದಿಂದ ಜರುಗಲಿದೆ. ಈ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಯಕ್ಷಗಾನ ನಾಟ್ಯ ವೈಭವದ ವಿಶೇಷ ಆಕರ್ಷಣೆ
ವಾರ್ಷಿಕೋತ್ಸವದ ಪ್ರಯುಕ್ತ ಈಶ್ವರಮಂಗಲದ ಶ್ರೀ ಶಿವ, ಪಂಚಾಕ್ಷರಿ ಯಕ್ಷ ಪ್ರತಿಷ್ಠಾನಂ ಬೆಳ್ಳಿಚಡವು ಇದರ ಸದಸ್ಯರಿಂದ ಅದ್ಭುತವಾದ ‘ಯಕ್ಷಗಾನ ನಾಟ್ಯ ವೈಭವ’ ಪ್ರದರ್ಶನಗೊಳ್ಳಲಿದೆ. ಪ್ರಸಿದ್ಧ ಭಾಗವತಿಕೆ ಗುರುಗಳಾದ ಶ್ರೀ ಮೋಹನ ಮೆಣಸಿನಕಾನ ಇವರ ಸಮರ್ಥ ನಿರ್ದೇಶನದಲ್ಲಿ ಈ ಕಲಾ ಪ್ರದರ್ಶನವು ಮೂಡಿಬರಲಿದ್ದು, ಕಲಾಭಿಮಾನಿಗಳಿಗೆ ರಸದೌತಣ ನೀಡಲಿದೆ.
ಈ ಬಾರಿಯ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ದುಗ್ಗಲಡ್ಕದ ನಿವಾಸಿ ಹಾಗೂ ದೇಲಂಪಾಡಿ ಸರಕಾರಿ ಉನ್ನತ ಪ್ರಾಥಮಿಕ ಶಾಲೆಯ ಅಧ್ಯಾಪಕಿಯಾಗಿರುವ ಶ್ರೀಮತಿ ಶೈಲಜಾ ಜಯರಾಜ್ ಅವರು ವಹಿಸಿಕೊಂಡಿದ್ದಾರೆ.
ದೈವಸ್ಥಾನದ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಲಿರುವ ಈ ಸಂಭ್ರಮಕ್ಕೆ ಭಕ್ತಾದಿಗಳು ಹಾಗೂ ಕಲಾಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ದೈವದ ಕೃಪೆಗೆ ಪಾತ್ರರಾಗಬೇಕೆಂದು ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ವಿನಂತಿಸಿದೆ.