Home HISTORYದುಬಾರೆ ಆನೆ ಶಿಬಿರದ ದಾರುಣ ಘಟನೆ: ತಜ್ಞರ ಸಮಿತಿ ವರದಿ ಕಡೆಗಣಿಸಿದ್ದೇ ದುರಂತಕ್ಕೆ ಕಾರಣ?

ದುಬಾರೆ ಆನೆ ಶಿಬಿರದ ದಾರುಣ ಘಟನೆ: ತಜ್ಞರ ಸಮಿತಿ ವರದಿ ಕಡೆಗಣಿಸಿದ್ದೇ ದುರಂತಕ್ಕೆ ಕಾರಣ?

by anamika
ದುಬಾರೆ ಆನೆ ಶಿಬಿರದ ದಾರುಣ ಘಟನೆ: ತಜ್ಞರ ಸಮಿತಿ ವರದಿ ಕಡೆಗಣಿಸಿದ್ದೇ ದುರಂತಕ್ಕೆ ಕಾರಣ?

​ಮಡಿಕೇರಿ: ಕೊಡಗಿನ ಪ್ರಸಿದ್ಧ ದುಬಾರೆ ಆನೆ ಶಿಬಿರದಲ್ಲಿ ಇತ್ತೀಚೆಗೆ (ಮೇ 18) ನಡೆದ ಆನೆಗಳ ಕಾದಾಟ ಹಾಗೂ ಅದರ ಬೆನ್ನಲ್ಲೇ ಸಂಭವಿಸಿದ ಪ್ರವಾಸಿ ಮಹಿಳೆ ಮತ್ತು ‘ಮಾರ್ತಾಂಡ’ ಆನೆಯ ಸಾವು ವನ್ಯಜೀವಿ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಭೀಕರ ದುರಂತಕ್ಕೆ ಅರಣ್ಯ ಇಲಾಖೆಯ ಬೇಜವಾಬ್ದಾರಿತನ ಹಾಗೂ ತಜ್ಞರ ಸಮಿತಿಯ ಶಿಫಾರಸುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದೇ ಮುಖ್ಯ ಕಾರಣ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.

ಏನಿದು ಘಟನೆ?

​ಮೇ 18ರಂದು ಕಾವೇರಿ ನದಿಯಲ್ಲಿ ಆನೆಗಳಿಗೆ ಸ್ನಾನ ಮಾಡಿಸುವ ಸಂದರ್ಭದಲ್ಲಿ ‘ಕಂಜನ್’ ಮತ್ತು ‘ಮಾರ್ತಾಂಡ’ ಆನೆಗಳ ನಡುವೆ ದಿಢೀರ್ ಜಗಳ ಆರಂಭವಾಗಿತ್ತು. ಕಂಜನ್ ಆನೆಯ ಭೀಕರ ದಾಳಿಗೆ ಸಿಲುಕಿದ ಮಾರ್ತಾಂಡ ಆನೆ ನಿಯಂತ್ರಣ ತಪ್ಪಿ ನದಿಯ ದಂಡೆಯಲ್ಲಿದ್ದ ಪ್ರವಾಸಿಗರ ಮೇಲೆ ಬಿದ್ದಿತ್ತು. ಈ ವೇಳೆ ಆನೆಯ ಅಡಿಯಲ್ಲಿ ಸಿಲುಕಿದ ಚೆನ್ನೈ ಮೂಲದ ಪ್ರವಾಸಿ ಮಹಿಳೆ ತುಳಸಿ (33) ಸ್ಥಳದಲ್ಲೇ ಮೃತಪಟ್ಟಿದ್ದರು. ಅವರ ಪತಿ ಮತ್ತು ಮಗು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ಇನ್ನು ಕಾದಾಟದಲ್ಲಿ ತೀವ್ರವಾಗಿ ಗಾಯಗೊಂಡು, ಆಂತರಿಕ ರಕ್ತಸ್ರಾವದಿಂದ ಬಳಲುತ್ತಿದ್ದ 53 ವರ್ಷದ ಸಾಕಾನೆ ‘ಮಾರ್ತಾಂಡ’ ಕೂಡ ಚಿಕಿತ್ಸೆ ಫಲಕಾರಿಯಾಗದೆ ಮರುದಿನ ಮುಂಜಾನೆ ಸಾವನ್ನಪ್ಪಿದೆ.

2019ರಲ್ಲೇ ಎಚ್ಚರಿಸಿದ್ದ ಹೈಕೋರ್ಟ್ ತಜ್ಞರ ಸಮಿತಿ

​ಈ ದುರಂತದ ಬೆನ್ನಲ್ಲೇ ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಹೈಕೋರ್ಟ್ ಆದೇಶದಂತೆ ವನ್ಯಜೀವಿ ತಜ್ಞ ಕೆ.ಎಂ. ಚಿಣ್ಣಪ್ಪ, ಪಶುವೈದ್ಯ ಸರ್ಜನ್ ಡಾ. ಕಲೈವಣ್ಣನ್ ಮತ್ತು ಮುಖ್ಯ ಪಶುವೈದ್ಯ ಡಾ. ಅಶ್ರಫ್ ಅವರನ್ನೊಳಗೊಂಡ ತಜ್ಞರ ಸಮಿತಿಯು 2019ರಲ್ಲೇ ಅರಣ್ಯ ಇಲಾಖೆಗೆ ಸಮಗ್ರ ವರದಿಯೊಂದನ್ನು ಸಲ್ಲಿಸಿತ್ತು. ಆ ವರದಿಯಲ್ಲಿ ದುಬಾರೆ ಶಿಬಿರದ ಸದ್ಯದ ಪರಿಸ್ಥಿತಿಯ ಬಗ್ಗೆ ಸ್ಪಷ್ಟ ಮುನ್ಸೂಚನೆಗಳನ್ನು ನೀಡಲಾಗಿತ್ತು.

ವರದಿಯಲ್ಲಿದ್ದ ಪ್ರಮುಖ ಶಿಫಾರಸುಗಳು:

​ಮಾನಸಿಕ ಒತ್ತಡ: ದುಬಾರೆ ಶಿಬಿರಕ್ಕೆ ಮಿತಿಮೀರಿ ಭೇಟಿ ನೀಡುವ ಪ್ರವಾಸಿಗರಿಂದಾಗಿ ಆನೆಗಳು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿವೆ. ಪ್ರವಾಸಿಗರ ಅತಿಯಾದ ಒಡನಾಟದಿಂದ ಆನೆಗಳ ನಡವಳಿಕೆಯಲ್ಲಿ ಅಪಾಯಕಾರಿ ಬದಲಾವಣೆಗಳಾಗುತ್ತಿವೆ ಎಂದು ಚಿತ್ರಸಹಿತ ವರದಿ ನೀಡಲಾಗಿತ್ತು.

​ಸುರಕ್ಷಿತ ಅಂತರ: ಪ್ರವಾಸಿಗರನ್ನು ಯಾವುದೇ ಕಾರಣಕ್ಕೂ ಆನೆಗಳ ತೀರಾ ಹತ್ತಿರಕ್ಕೆ ಬಿಡಬಾರದು ಮತ್ತು ಕಡ್ಡಾಯವಾಗಿ ದೂರವಿಡಬೇಕು ಎಂದು ಸಮಿತಿ ಸ್ಪಷ್ಟಪಡಿಸಿತ್ತು.

​ಸಂಖ್ಯೆಯ ಮಿತಿ: ಒಂದು ಆನೆ ಶಿಬಿರದಲ್ಲಿ ಗರಿಷ್ಠ 15 ಆನೆಗಳಿಗಿಂತ ಹೆಚ್ಚು ಇರಬಾರದು ಎಂದು ಶಿಫಾರಸು ಮಾಡಲಾಗಿತ್ತು. ಆದರೆ, ಪ್ರಸ್ತುತ ದುಬಾರೆ ಶಿಬಿರದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಬರೋಬ್ಬರಿ 30 ಆನೆಗಳನ್ನು ಇರಿಸಲಾಗಿದೆ.

​ವನ್ಯಜೀವಿ ಪ್ರೇಮಿಗಳ ಆಕ್ರೋಶ: “ಅರಣ್ಯ ಇಲಾಖೆಯು ತಜ್ಞರ ಸಮಿತಿಯ ವರದಿಯನ್ನು ಸಕಾಲದಲ್ಲಿ ಜಾರಿಗೊಳಿಸಿ, ಪ್ರವಾಸಿಗರು ಮತ್ತು ಆನೆಗಳ ನಡುವೆ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಮಾಡಿದ್ದರೆ ಇಂದು ಇಬ್ಬರು ಅಮೂಲ್ಯ ಜೀವಗಳನ್ನು ಉಳಿಸಬಹುದಿತ್ತು” ಎಂದು ಸ್ಥಳೀಯರು ಹಾಗೂ ವನ್ಯಜೀವಿ ಪ್ರೇಮಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಲಾಖೆಯ ಇಂದಿನ ಕ್ರಮಗಳು

​ದುರಂತ ಸಂಭವಿಸಿದ ನಂತರ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ತನಿಖೆಗೆ ಆದೇಶಿಸಿದ್ದು, ರಾಜ್ಯದ ಎಲ್ಲಾ ಆನೆ ಶಿಬಿರಗಳಿಗೆ ಹೊಸ ಮಾರ್ಗಸೂಚಿ (SOP) ಪ್ರಕಟಿಸಿದ್ದಾರೆ.

ಇನ್ನು ಮುಂದೆ ಪ್ರವಾಸಿಗರು ಆನೆಗಳು ಸ್ನಾನ ಮಾಡುವುದನ್ನು ಕನಿಷ್ಠ 100 ಅಡಿ ದೂರದಿಂದಷ್ಟೇ ವೀಕ್ಷಿಸಬೇಕು ಹಾಗೂ ಆನೆಗಳೊಂದಿಗೆ ಸೆಲ್ಫಿ ತಗೆಯುವುದು, ಮುಟ್ಟುವುದು ಮತ್ತು ಆಹಾರ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೆ “ಸಾವಿನ ನಂತರ ನಿಯಮಗಳನ್ನು ತರುವುದಕ್ಕಿಂತ ಮುಂಚಿತವಾಗಿಯೇ ಎಚ್ಚೆತ್ತುಕೊಂಡಿದ್ದರೆ ಈ ದುರಂತ ನಡೆಯುತ್ತಿರಲಿಲ್ಲ” ಎನ್ನುವುದು ಸಾರ್ವಜನಿಕರ ವಾದವಾಗಿದೆ.

You may also like

Leave a Comment