Home HISTORYಒಂದನೇ ತರಗತಿ ದಾಖಲಾತಿ ವಯೋಮಿತಿ ಆದೇಶ ಮರುಪರಿಶೀಲನೆಗೆ ಹೈಕೋರ್ಟ್ ಸೂಚನೆ

ಒಂದನೇ ತರಗತಿ ದಾಖಲಾತಿ ವಯೋಮಿತಿ ಆದೇಶ ಮರುಪರಿಶೀಲನೆಗೆ ಹೈಕೋರ್ಟ್ ಸೂಚನೆ

by anamika

ಒಂದನೇ ತರಗತಿ ದಾಖಲಾತಿ ವಯೋಮಿತಿ ಆದೇಶ ಮರುಪರಿಶೀಲನೆಗೆ ಹೈಕೋರ್ಟ್ ಸೂಚನೆ

ಬೆಂಗಳೂರು: ಒಂದನೇ ತರಗತಿ ದಾಖಲಾತಿಯ ವಯೋಮಿತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಮರುಪರಿಶೀಲಿಸುವಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ.

ಶಿಕ್ಷಣ ಇಲಾಖೆಯ ಹೊಸ ವಯೋಮಿತಿ ನಿಯಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರ ರಜಾಕಾಲೀನ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಸರ್ಕಾರದ ಹೊಸ ನಿಯಮದಿಂದ ಸುಮಾರು 5 ಲಕ್ಷ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಈಗಾಗಲೇ ಪೂರ್ವ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿರುವ ಮಕ್ಕಳು ಮತ್ತೆ ಯುಕೆಜಿ ಓದಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ವಾದಿಸಿದರು.

ಹೀಗಾಗಿ, 5 ವರ್ಷ 5 ತಿಂಗಳು ವಯಸ್ಸು ಪೂರ್ಣಗೊಳಿಸಿರುವ ಮಕ್ಕಳಿಗೂ ಒಂದನೇ ತರಗತಿಗೆ ದಾಖಲಾತಿಗೆ ಅವಕಾಶ ನೀಡುವಂತೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಪರ ಹೆಚ್ಚುವರಿ ಅಡ್ವಕೇಟ್ ಜನರಲ್, ವಯೋಮಿತಿ ವಿಚಾರವನ್ನು ಮರುಪರಿಶೀಲಿಸಿ ಅಗತ್ಯವಿದ್ದರೆ ಹೊಸ ಆದೇಶ ಹೊರಡಿಸಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಈ ಹಿನ್ನೆಲೆಯಲ್ಲಿ, ವಯೋಮಿತಿ ಸಡಿಲಿಕೆ ಕುರಿತು ಪರಿಶೀಲನೆ ನಡೆಸಿ ಒಂದು ವಾರದೊಳಗೆ ಸೂಕ್ತ ಆದೇಶ ಪ್ರಕಟಿಸುವಂತೆ ಶಾಲಾ ಶಿಕ್ಷಣ ಇಲಾಖೆಗೆ ಹೈಕೋರ್ಟ್ ಸೂಚನೆ ನೀಡಿದ್ದು, ವಿಚಾರಣೆಯನ್ನು ಮುಂದೂಡಿದೆ.

You may also like

Leave a Comment