Home ರಾಜ್ಯಪ್ರಾಮಾಣಿಕತೆಗೆ ಸಂದ ಜಯ: ನಿಧಿ ಹಸ್ತಾಂತರಿಸಿದ್ದ ಲಕ್ಕುಂಡಿಯ ರಿತ್ತಿ ಕುಟುಂಬಕ್ಕೆ ಸಿಕ್ಕಿತು ಬಂಪರ್ ಉಡುಗೊರೆ!

ಪ್ರಾಮಾಣಿಕತೆಗೆ ಸಂದ ಜಯ: ನಿಧಿ ಹಸ್ತಾಂತರಿಸಿದ್ದ ಲಕ್ಕುಂಡಿಯ ರಿತ್ತಿ ಕುಟುಂಬಕ್ಕೆ ಸಿಕ್ಕಿತು ಬಂಪರ್ ಉಡುಗೊರೆ!

by Editor

ಗದಗ: ಮನೆ ಪಾಯ ಅಗೆಯುವಾಗ ಸಿಕ್ಕ ಬರೋಬ್ಬರಿ 466 ಗ್ರಾಂ ಚಿನ್ನದ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದ ಲಕ್ಕುಂಡಿ ಗ್ರಾಮದ ರಿತ್ತಿ ಕುಟುಂಬಕ್ಕೆ ಕೊನೆಗೂ ಜಿಲ್ಲಾಡಳಿತ ಹಾಗೂ ಗ್ರಾಮ ಪಂಚಾಯತ್ ನೆರವು ಘೋಷಿಸಿದೆ. ಗುರುವಾರ ನಡೆದ ಲಕ್ಕುಂಡಿ ಗ್ರಾಮ ಪಂಚಾಯತ್‌ನ ವಿಶೇಷ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಈ ಪ್ರಕರಣವನ್ನು ವಿಶೇಷವೆಂದು ಪರಿಗಣಿಸಿ ರಿತ್ತಿ ಕುಟುಂಬಕ್ಕೆ ಮಾರುತಿ ನಗರದಲ್ಲಿ 30*40 ಅಳತೆಯ ನಿವೇಶನ ನೀಡಲು ತೀರ್ಮಾನಿಸಲಾಗಿದೆ.

ಜನವರಿ 10ರಂದು ಮನೆ ಕೆಲಸದ ವೇಳೆ ನಿಧಿ ಪತ್ತೆಯಾದಾಗ ಆಸೆಗೆ ಬೀಳದೆ ತಾಯಿ ಕಸ್ತೂರೆವ್ವ ಹಾಗೂ ಮಗ ಪ್ರಜ್ವಲ್ ರಿತ್ತಿ ಅದನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ್ದರು. ಈ ಪ್ರಾಮಾಣಿಕತೆಯನ್ನು ಗೌರವಿಸಿರುವ ಪಂಚಾಯತ್, ಜನವರಿ 26ರ ಗಣರಾಜ್ಯೋತ್ಸವದಂದು ನಿವೇಶನದ ಹಕ್ಕುಪತ್ರವನ್ನು ಕುಟುಂಬಕ್ಕೆ ನೀಡಲಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಸಚಿವರು ಹಾಗೂ ಶಾಸಕರ ಅನುದಾನದಡಿ ಮನೆ ನಿರ್ಮಿಸಿಕೊಡುವ ಭರವಸೆಯನ್ನು ನೀಡಲಾಗಿದ್ದು, ಈ ಮೂಲಕ ಬಡ ಕುಟುಂಬದ ನೆರವಿಗೆ ಆಡಳಿತ ಮಂಡಳಿ ಮುಂದಾಗಿದೆ.

ನಿವೇಶನದ ಜೊತೆಗೆ ಪ್ರಜ್ವಲ್ ರಿತ್ತಿಯ ಪ್ರಾಮಾಣಿಕತೆ ಎಲ್ಲರಿಗೂ ಮಾದರಿಯಾಗಲಿ ಎಂಬ ಉದ್ದೇಶದಿಂದ ಗ್ರಾಮದ ಎಲ್ಲ ಶಾಲೆಗಳಲ್ಲಿ ಆತನ ಫೋಟೋ ಹಾಕಲು ನಿರ್ಧರಿಸಲಾಗಿದೆ. ಅಲ್ಲದೆ ಪ್ರಜ್ವಲ್ ಮುದಿನ ಶಿಕ್ಷಣಕ್ಕೆ ಉಚಿತ ವ್ಯವಸ್ಥೆ ಹಾಗೂ ಆತನ ತಾಯಿ ಗಂಗಮ್ಮ ಅವರಿಗೆ ಕೆಲಸ ನೀಡುವ ಮಹತ್ವದ ಭರವಸೆಯನ್ನು ಪಂಚಾಯತ್ ನೀಡಿದೆ. ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರ ಸಮ್ಮುಖದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ರಿತ್ತಿ ಕುಟುಂಬದ ನಿಸ್ವಾರ್ಥ ನಡೆಯನ್ನು ಇಡೀ ಗ್ರಾಮವೇ ಶ್ಲಾಘಿಸಿದೆ.

You may also like

Leave a Comment