ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಟ್ಟಿಕೇರಿಯಲ್ಲಿ ತಲೆಮಾರುಗಳಿಂದ ಸಾಮಾಜಿಕ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸುತ್ತಾ ಬಂದಿರುವ ಪ್ರತಿಷ್ಠಿತ ಪಿಕಳೆ ಕುಟುಂಬದ ಸದಸ್ಯ ರಾಜೀವ್ ಪಿಕಳೆ (65) ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರವಾರದ ಪಿಕಳೆ ರಸ್ತೆ ಎಂದು ನಾಮಕರಣಗೊಳ್ಳುವಷ್ಟು ಖ್ಯಾತಿ ಹೊಂದಿರುವ ಕುಟುಂಬದ ಈ ಸದಸ್ಯರ ಸಾವು ಜಿಲ್ಲೆಯಾದ್ಯಂತ ತೀವ್ರ ದಿಗ್ಭ್ರಮೆ ಮೂಡಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಸಾವಿಗೆ ಮುನ್ನ ಬರೆದಿದ್ದ ಡೆತ್ ನೋಟ್ ವಶಪಡಿಸಿಕೊಂಡಿದ್ದಾರೆ.
ಪರಿವಾರದ ಮೂಲಗಳ ಪ್ರಕಾರ, ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ ವಿಡಿಯೋವೊಂದು ರಾಜೀವ್ ಅವರನ್ನು ತೀವ್ರ ಮಾನಸಿಕ ಒತ್ತಡಕ್ಕೆ ತಳ್ಳಿತ್ತು. ರಾಜೀವ್ ಅವರು ಅವಧಿ ಮುಗಿದ (Expired) ಔಷಧ ನೀಡಿದ್ದಾರೆ ಎಂದು ಆರೋಪಿಸಿ ಯೂಟ್ಯೂಬರ್ ಒಬ್ಬರು ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಮಾಜದಲ್ಲಿ ತಮ್ಮ ಮತ್ತು ಕುಟುಂಬದ ಗೌರವಕ್ಕೆ ಧಕ್ಕೆಯಾಗಿದೆ ಎಂದು ಅವರು ತೀವ್ರವಾಗಿ ನೊಂದಿದ್ದರು ಎನ್ನಲಾಗಿದೆ. ಇದೇ ತೇಜೋವಧೆಯು ಅವರ ಆತ್ಮಹತ್ಯೆಗೆ ಪ್ರಬಲ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಎರಡು ತಲೆಮಾರುಗಳಿಂದ ಸೇವೆಯ ಇತಿಹಾಸ ಹೊಂದಿರುವ ಪಿಕಳೆ ಕುಟುಂಬದ ರಾಜೀವ್ ಅವರ ಮಕ್ಕಳೂ ಸಹ ವೈದ್ಯರಾಗಿದ್ದಾರೆ. ಅಂಕೋಲಾದ ಹಟ್ಟಿಕೇರಿಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ರಾಜೀವ್ ಪಿಕಳೆ ಅವರ ಈ ಅನಿರೀಕ್ಷಿತ ನಿರ್ಧಾರವು ಸೋಶಿಯಲ್ ಮೀಡಿಯಾ ದುರ್ಬಳಕೆಯ ಭೀಕರತೆಯನ್ನು ಎತ್ತಿ ತೋರಿಸಿದೆ. ಪ್ರಸ್ತುತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಡೆತ್ ನೋಟ್ ಆಧರಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಸೋಶಿಯಲ್ ಮೀಡಿಯಾ ತೇಜೋವಧೆಗೆ ಬೇಸತ್ತು ಪ್ರತಿಷ್ಠಿತ ಪಿಕಳೆ ಕುಟುಂಬದ ವ್ಯಕ್ತಿ ಆತ್ಮಹತ್ಯೆ
107