Home ಕ್ರೈಂಬೆಳಗಾವಿ: ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್ ಎಸಗಿದ್ದ ಪಾಪಿಗಳಿಗೆ ಜೀವಾವಧಿ ಶಿಕ್ಷೆ!

ಬೆಳಗಾವಿ: ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್ ಎಸಗಿದ್ದ ಪಾಪಿಗಳಿಗೆ ಜೀವಾವಧಿ ಶಿಕ್ಷೆ!

by Editor

ಬೆಳಗಾವಿ: ಬೆಳಗಾವಿಯ ಸಾವಗಾಂವ್ ಫಾರ್ಮ್‌ಹೌಸ್‌ನಲ್ಲಿ ಅಪ್ರಾಪ್ತೆಯ ಮೇಲೆ ನಡೆದಿದ್ದ ಅಮಾನವೀಯ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಇಲ್ಲಿನ ಪೋಕ್ಸೋ ವಿಶೇಷ ನ್ಯಾಯಾಲಯವು ಮರಣದಂಡನೆಗೆ ಸಮನಾದ ಕಠಿಣ ಶಿಕ್ಷೆ ವಿಧಿಸಿದೆ. ಕೇವಲ ಎಂಟು ತಿಂಗಳ ದಾಖಲೆ ಅವಧಿಯಲ್ಲಿ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ಅವರು, ಸಮಾಜ ತಲೆತಗ್ಗಿಸುವಂತೆ ಮಾಡಿದ ಈ ಕೃತ್ಯದ ನಾಲ್ವರು ಆರೋಪಿಗಳಿಗೆ ಜೈಲು ಶಿಕ್ಷೆ ಹಾಗೂ ಭಾರಿ ಮೊತ್ತದ ದಂಡ ವಿಧಿಸಿ ಮಹತ್ವದ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಒದಗಿಸುವಲ್ಲಿ ಕಾನೂನು ವ್ಯವಸ್ಥೆ ಯಶಸ್ವಿಯಾಗಿದೆ.

ಪ್ರಕರಣದ ಪ್ರಮುಖ ಆರೋಪಿಗಳಾದ ಸಾಕೀಬ್ ನಿಜಾಮಿ (22) ಮತ್ತು ರವಿ ನಾಯ್ಯೋಡಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ತಲಾ 8.76 ಲಕ್ಷ ರೂಪಾಯಿಗಳ ಬೃಹತ್ ದಂಡ ವಿಧಿಸಿದೆ. ಇದೇ ಕೃತ್ಯಕ್ಕೆ ಸಾಥ್ ನೀಡಿದ ರೋಹನ್ ಪಾಟೀಲ್ ಮತ್ತು ಅಶುತೋಷ್ ಪಾಟೀಲ್‌ಗೆ 20 ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ 6 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ದಂಡದ ಮೊತ್ತದ ಜೊತೆಗೆ, ಸಂತ್ರಸ್ತೆಯ ಭವಿಷ್ಯದ ದೃಷ್ಟಿಯಿಂದ ಕಾನೂನು ಸೇವಾ ಪ್ರಾಧಿಕಾರದ ಮೂಲಕ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ.

ಏನಿದು ಘಟನೆ?: 2025ರ ಮೇ 10ರಂದು ನಡೆದಿದ್ದ ಈ ಘಟನೆಯಲ್ಲಿ, ಆರೋಪಿಗಳು ಸಂತ್ರಸ್ತೆಯನ್ನು ಬೆಳಗಾವಿಯ ಫಾರ್ಮ್‌ಹೌಸ್‌ಗೆ ಕರೆದೊಯ್ದಿದ್ದರು. ಆಕೆ ಅಪ್ರಾಪ್ತೆ ಎಂದು ತಿಳಿದಿದ್ದರೂ ಬಲವಂತವಾಗಿ ಬಿಯರ್ ಕುಡಿಸಿ ಕಾಮಪಿಪಾಸುಗಳು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು. ಅಷ್ಟೇ ಅಲ್ಲದೆ, ಅಮಾನವೀಯತೆಯ ಪರಮಾವಧಿ ಎಂಬಂತೆ ಸಂತ್ರಸ್ತೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನೂ ಎಗರಿಸಿ ಪರಾರಿಯಾಗಿದ್ದರು. ಈ ಬಗ್ಗೆ ಪೋಷಕರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ್ದ ಪೊಲೀಸರು ಭದ್ರ ಸಾಕ್ಷ್ಯಗಳನ್ನು ಒದಗಿಸಿದ್ದರು, ಇದು ಇಂದು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲು ಕಾರಣವಾಗಿದೆ.

You may also like

Leave a Comment