Home ಜಿಲ್ಲೆಜಾಮೀನು ನೀಡುವ ಮುನ್ನ ಎಚ್ಚರ: ಮಂಗಳೂರು ಕಮಿಷನರ್ ವಾರ್ನಿಂಗ್!

ಜಾಮೀನು ನೀಡುವ ಮುನ್ನ ಎಚ್ಚರ: ಮಂಗಳೂರು ಕಮಿಷನರ್ ವಾರ್ನಿಂಗ್!

by Editor

ಮಂಗಳೂರು: ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ನ್ಯಾಯಾಲಯದಿಂದ ಜಾಮೀನು ಪಡೆದು ತಲೆಮರೆಸಿಕೊಳ್ಳುವ ಆರೋಪಿಗಳಿಗೆ ಮಾತ್ರವಲ್ಲ, ಅವರಿಗೆ ಶ್ಯೂರಿಟಿ (ಜಾಮೀನು ಭರವಸೆ) ನೀಡುವವರಿಗೂ ಇನ್ಮುಂದೆ ಪೊಲೀಸರು ಬಿಸಿ ಮುಟ್ಟಿಸಲಿದ್ದಾರೆ. “ಅಪರಾಧಿಗಳಿಗೆ ಜಾಮೀನು ನೀಡುವಾಗ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು, ಇಲ್ಲದಿದ್ದರೆ ಗಂಭೀರ ಕಾನೂನು ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಕಡಕ್ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ನ್ಯಾಯಾಂಗ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವ ರೌಡಿಗಳಿಗೆ ಸಾಥ್ ನೀಡುವವರಿಗೆ ಆಯುಕ್ತರು ನೇರ ಸಂದೇಶ ರವಾನಿಸಿದ್ದಾರೆ.

ನಗರದಲ್ಲಿ ಕಳೆದ ಆರು ತಿಂಗಳಿನಿಂದ ಕೊಲೆ, ಕೋಮು ಗಲಭೆ, ಅತ್ಯಾಚಾರ ಹಾಗೂ ಗುಂಪು ಅತ್ಯಾಚಾರದಂತಹ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ರೌಡಿ ಶೀಟರ್‌ಗಳನ್ನು ಸೆರೆಹಿಡಿಯಲು ವಿಶೇಷ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ. ಆರೋಪಿಗಳು ಪತ್ತೆಯಾಗದಿದ್ದಾಗ, ಅವರಿಗೆ ನ್ಯಾಯಾಲಯದಲ್ಲಿ ಶ್ಯೂರಿಟಿ ನಿಂತ ವ್ಯಕ್ತಿಗಳ ವಿರುದ್ಧ ಕ್ರಮ ಜರುಗಿಸುವಂತೆ ಆಯುಕ್ತರು ಪ್ರತಿ ಪೊಲೀಸ್ ಠಾಣೆಗಳಿಗೂ ಸೂಚನೆ ನೀಡಿದ್ದಾರೆ. ಅದರಂತೆ ಈಗಾಗಲೇ 15 ಮಂದಿ ರೌಡಿಗಳನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗದ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಯೂ ಆರಂಭವಾಗಿದೆ.

ಸಾಮಾನ್ಯವಾಗಿ ಪರಿಚಯಸ್ಥರು ಅಥವಾ ಸಂಬಂಧಿಕರು ಎಂಬ ಕಾರಣಕ್ಕೆ ಹಲವರು ಗಂಭೀರ ಆರೋಪಿಗಳಿಗೆ ಜಾಮೀನು ನೀಡುತ್ತಾರೆ. ಆದರೆ, ಒಮ್ಮೆ ಜಾಮೀನು ಪಡೆದ ಆರೋಪಿ ವಿಚಾರಣೆಗೆ ಹಾಜರಾಗದೆ ಪರಾರಿಯಾದರೆ, ಆತನನ್ನು ಪತ್ತೆ ಹಚ್ಚುವ ಜವಾಬ್ದಾರಿ ಜಾಮೀನುದಾರನ ಮೇಲಿರುತ್ತದೆ. ತಪ್ಪಿದಲ್ಲಿ ಜಾಮೀನುದಾರನ ಆಸ್ತಿ ಮುಟ್ಟುಗೋಲು ಅಥವಾ ದಂಡದಂತಹ ಕ್ರಮಗಳನ್ನು ಎದುರಿಸಬೇಕಾಗುತ್ತದೆ. ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುವವರಿಗೆ ಆಶ್ರಯ ಅಥವಾ ಭರವಸೆ ನೀಡುವವರು ಇನ್ನು ಮುಂದೆ ಹತ್ತು ಬಾರಿ ಯೋಚಿಸಬೇಕಾದ ಅನಿವಾರ್ಯತೆಯನ್ನು ಮಂಗಳೂರು ಪೊಲೀಸರು ಸೃಷ್ಟಿಸಿದ್ದಾರೆ.

You may also like

Leave a Comment