Home ದೇಶದೇಶದ ಅತಿ ದೊಡ್ಡ ದರೋಡೆ: ಬಿಲ್ಡರ್ ಆಪ್ತರಿಂದಲೇ ‘ಗನ್’ ಪಾಯಿಂಟ್ ಸ್ಕೆಚ್?

ದೇಶದ ಅತಿ ದೊಡ್ಡ ದರೋಡೆ: ಬಿಲ್ಡರ್ ಆಪ್ತರಿಂದಲೇ ‘ಗನ್’ ಪಾಯಿಂಟ್ ಸ್ಕೆಚ್?

by Editor

ಬೆಳಗಾವಿ: ಕರ್ನಾಟಕ ಮತ್ತು ಗೋವಾ ಗಡಿ ಭಾಗದ ಚೋರ್ಲಾ ಘಾಟ್ ಪ್ರದೇಶದಲ್ಲಿ ಸುಮಾರು 400 ಕೋಟಿ ರೂಪಾಯಿ ನಗದು ಸಾಗಿಸುತ್ತಿದ್ದ ಎರಡು ಕಂಟೇನರ್‌ಗಳನ್ನು ಹೈಜಾಕ್ ಮಾಡಿರುವ ಆಘಾತಕಾರಿ ದರೋಡೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 2025ರ ಅಕ್ಟೋಬರ್ 16ರಂದು ಈ ಘಟನೆ ನಡೆದಿದ್ದು, ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿದ್ದ ಬೃಹತ್ ಮೊತ್ತದ ಹಣವನ್ನು ದರೋಡೆಕೋರರು ಲೂಟಿ ಮಾಡಿದ್ದಾರೆ. ಈ ಹಣ ಬೆಳಗಾವಿ ಮೂಲದ ಬಿಲ್ಡರ್ ಕಿಶೋರ್ ಎಂಬುವವರಿಗೆ ಸೇರಿದ್ದು ಎನ್ನಲಾಗಿದ್ದು, ಪ್ರಕರಣದಲ್ಲಿ 1000 ಕೋಟಿ ಮೌಲ್ಯದ ಹಳೆಯ ನೋಟುಗಳೂ ಇದ್ದವು ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಸಿನಿಮಾ ಶೈಲಿಯ ದರೋಡೆ ಈಗ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಸಂದೀಪ್ ಪಾಟೀಲ್ ನೀಡಿರುವ ಹೇಳಿಕೆಗಳು ಬೆಚ್ಚಿಬೀಳಿಸುವಂತಿವೆ. ದರೋಡೆಯಾದ ಹಣ ಬಿಡುಗಡೆ ಮಾಡಲು 100 ಕೋಟಿ ರೂಪಾಯಿ ಬೇಡಿಕೆ ಇಡಲಾಗಿದ್ದು, ಈ ವೇಳೆ ತನ್ನ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಅವರು ದೂರಿದ್ದಾರೆ. ಬಿಲ್ಡರ್ ಕಿಶೋರ್ ಅವರ ಆಪ್ತ ಸ್ನೇಹಿತರಾದ ವಿಶಾಲ್ ನಾಯ್ಡು ಮತ್ತು ವಿರಾಟ್ ಗಾಂಧಿ ಎಂಬುವವರೇ ಈ ಕೃತ್ಯದ ಹಿಂದಿನ ಸೂತ್ರಧಾರಿಗಳು ಎಂದು ಪಾಟೀಲ್ ಆರೋಪಿಸಿದ್ದಾರೆ. ಅಕ್ಟೋಬರ್ 22ರಂದು ತನ್ನ ತಲೆಗೆ ಗನ್ ಇಟ್ಟು, ದರೋಡೆ ಆರೋಪವನ್ನು ತನ್ನ ಮೇಲೆ ಹೊರಿಸಲು ಯತ್ನಿಸಲಾಯಿತು ಮತ್ತು ಪ್ರಾಣ ಬೆದರಿಕೆ ಹಾಕಿ ಅಪಹರಿಸಲಾಗಿತ್ತು ಎಂದು ಅವರು ಪೊಲೀಸ್ ದೂರಿನಲ್ಲಿ ವಿವರಿಸಿದ್ದಾರೆ.
ಈ ಬೃಹತ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಸಿಕ್ ಪೊಲೀಸರು ಈಗಾಗಲೇ ನಾಲ್ವರನ್ನು ಬಂಧಿಸಿ ತನಿಖೆ ಚುರುಕುಗೊಳಿಸಿದ್ದಾರೆ. ದೂರು ನೀಡಿ ಹಲವು ದಿನಗಳಾದರೂ ಪ್ರಮುಖ ಆರೋಪಿಗಳು ಇನ್ನೂ ಸೆರೆಯಾಗಿಲ್ಲ ಎಂದು ದೂರುದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಳೆಯ ನೋಟುಗಳ ಅಕ್ರಮ ಸಾಗಾಟ, ಹೈಜಾಕ್ ಮತ್ತು ಹಫ್ತಾ ವಸೂಲಿಯಂತಹ ಹಲವು ಆಯಾಮಗಳನ್ನು ಈ ಪ್ರಕರಣ ಒಳಗೊಂಡಿದ್ದು, ತನಿಖೆ ಮುಂದುವರಿದಂತೆ ಇನ್ನಷ್ಟು ಪ್ರಭಾವಿಗಳ ಹೆಸರು ಹೊರಬರುವ ಸಾಧ್ಯತೆಯಿದೆ. ದೇಶದ ಇತಿಹಾಸದಲ್ಲೇ ಅತಿ ದೊಡ್ಡ ನಗದು ದರೋಡೆ ಎನ್ನಲಾದ ಈ ಘಟನೆ ಸಾರ್ವಜನಿಕ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.

You may also like

Leave a Comment