ಹಗರಿಬೊಮ್ಮನಹಳ್ಳಿ: ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಚಿನ್ನದ ಬೆಲೆಯಿಂದ ಕಂಗೆಟ್ಟಿರುವ ಸಾಮಾನ್ಯ ಜನರ ಆತಂಕಕ್ಕೆ ವಿಜಯನಗರ ಜಿಲ್ಲೆಯ ಭಕ್ತನೊಬ್ಬ ದೇವಿಯ ಮೊರೆ ಹೋಗುವ ಮೂಲಕ ದನಿಯಾಗಿದ್ದಾರೆ. ತಾಲೂಕಿನ ಚಿಮ್ನಳ್ಳಿ ಗ್ರಾಮದ ಪ್ರಸಿದ್ಧ ಚಿಮ್ನಳ್ಳಿ ದುರ್ಗಮ್ಮ ದೇವಿಯ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ, ಭಕ್ತ ಕೆ. ನಾಗರಾಜ ಉಲವತ್ತಿ ಅವರು ಚಿನ್ನದ ದರ ಇಳಿಕೆಯಾಗಲಿ ಎಂದು ದೇವಿಗೆ ಸಲ್ಲಿಸಿದ ವಿಭಿನ್ನ ಹರಕೆ ಈಗ ಎಲ್ಲರ ಗಮನ ಸೆಳೆಯುತ್ತಿದೆ.
ದೇವಿಯ ರಥೋತ್ಸವದ ಸಂಭ್ರಮದ ನಡುವೆ ನಾಗರಾಜ ಅವರು ಬಾಳೆಹಣ್ಣಿನ ಮೇಲೆ “ಚಿನ್ನದ ದರ ಇಳಿಯಲಿ, ಮುನಿದ ಚಿನ್ನ ಒಲಿಯಲಿ” ಎಂದು ಬರೆದು ದೇವಿಗೆ ಅರ್ಪಿಸುವ ಮೂಲಕ ತಮ್ಮ ಭಕ್ತಿ ಮೆರೆದಿದ್ದಾರೆ. ಬಡವರು ಹಾಗೂ ಸಾಮಾನ್ಯ ವರ್ಗದ ಜನರಿಗೂ ಚಿನ್ನ ಖರೀದಿಸಲು ಸಾಧ್ಯವಾಗುವಂತಾಗಲಿ ಎಂಬ ಅವರ ಈ ಅಪರೂಪದ ಆಶಯ ಜಾತ್ರೆಯಲ್ಲಿ ನೆರೆದಿದ್ದ ಸಾವಿರಾರು ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಏರಿಕೆಯಾಗಿ ಸಣ್ಣ ಪುಟ್ಟ ಆಭರಣ ಕೊಳ್ಳುವುದು ಕೂಡ ಕನಸಾಗುತ್ತಿರುವ ಈ ಕಾಲದಲ್ಲಿ, ಈ ವಿಶಿಷ್ಟ ಪ್ರಾರ್ಥನೆ ಸಾಮಾಜಿಕವಾಗಿಯೂ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.
ಚಿಮ್ನಳ್ಳಿ ದುರ್ಗಮ್ಮನ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ವಿವಿಧ ಹರಕೆಗಳನ್ನು ಹೊತ್ತು ಬರುತ್ತಾರೆ. ಆದರೆ ನಾಗರಾಜ ಅವರ ಈ ಜನಪರ ಆಶಯದ ಹರಕೆಯು ಭಕ್ತಿ ಮತ್ತು ಪ್ರಸಕ್ತ ಆರ್ಥಿಕ ಪರಿಸ್ಥಿತಿಯ ನಡುವಿನ ಕನ್ನಡಿಯಂತಿದೆ. “ದೇವಿಯ ಕೃಪೆಯಿಂದಾದರೂ ಚಿನ್ನದ ಬೆಲೆ ಇಳಿದು ಬಡವರ ಮನೆಯಲ್ಲಿ ಮದುವೆ-ಮುಂಜಿಗಳಿಗೆ ಚಿನ್ನ ಕೊಳ್ಳಲು ಶಕ್ತಿ ಬರಲಿ” ಎಂಬ ಹಾರೈಕೆ ಅಲ್ಲಿ ನೆರೆದಿದ್ದ ಇತರ ಭಕ್ತರಿಂದಲೂ ಕೇಳಿಬಂದಿದೆ.