Home ಧಾರ್ಮಿಕರಂಜಾನ್ ಹಿನ್ನೆಲೆ ಉರ್ದು ಶಾಲೆಗಳ ಸಮಯ ಬದಲಾವಣೆ: ಸರ್ಕಾರದ ಮಹತ್ವದ ಆದೇಶ

ರಂಜಾನ್ ಹಿನ್ನೆಲೆ ಉರ್ದು ಶಾಲೆಗಳ ಸಮಯ ಬದಲಾವಣೆ: ಸರ್ಕಾರದ ಮಹತ್ವದ ಆದೇಶ

by Editor

ಬೆಂಗಳೂರು: ರಾಜ್ಯದ ಉರ್ದು ಮಾಧ್ಯಮ ಶಾಲೆಗಳ ಶಾಲಾ ಸಮಯವನ್ನು ರಂಜಾನ್ ತಿಂಗಳ ಹಿನ್ನೆಲೆಯಲ್ಲಿ ಬದಲಾವಣೆ ಮಾಡಿ ಕರ್ನಾಟಕ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ರಂಜಾನ್ ಹಬ್ಬದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಅನುಕೂಲವಾಗುವಂತೆ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಹೊಸ ವೇಳಾಪಟ್ಟಿಯು ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಉರ್ದು ಮಾಧ್ಯಮದ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಅನ್ವಯವಾಗಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.

ಪರಿಷ್ಕೃತ ಸಮಯದ ಪ್ರಕಾರ, ರಂಜಾನ್ ತಿಂಗಳು ಆರಂಭವಾದ ದಿನದಿಂದ 2026ರ ಮಾರ್ಚ್ 20ರವರೆಗೆ ಶಾಲೆಗಳು ಬೆಳಿಗ್ಗೆ 8.00 ಗಂಟೆಯಿಂದ ಮಧ್ಯಾಹ್ನ 12.45ರವರೆಗೆ ಮಾತ್ರ ಕಾರ್ಯನಿರ್ವಹಿಸಲಿವೆ. ಸಾಮಾನ್ಯ ದಿನಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4.20ರವರೆಗೆ ತರಗತಿಗಳು ನಡೆಯುತ್ತಿದ್ದವು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮನವಿಯನ್ನು ಪುರಸ್ಕರಿಸಿದ ಸರ್ಕಾರ, 2002ರಲ್ಲಿದ್ದ ಹಳೆಯ ಆದೇಶವನ್ನು ಪರಿಶೀಲಿಸಿ ಈ ಕ್ರಮ ಕೈಗೊಂಡಿದೆ. ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಹಬ್ಬದ ಆಚರಣೆಗೆ ಪೂರಕವಾಗಿ ಈ ಬದಲಾವಣೆ ಮಾಡಲಾಗಿದೆ.

ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ಪಕ್ಷಗಳಿಂದ ‘ಓಲೈಕೆ ರಾಜಕೀಯ’ ಎಂಬ ಟೀಕೆ ವ್ಯಕ್ತವಾಗಿದ್ದು, ಇದಕ್ಕೆ ಗೃಹ ಸಚಿವ ಜಿ. ಪರಮೇಶ್ವರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. “ಇದು ಅಲ್ಪಸಂಖ್ಯಾತರ ಓಲೈಕೆಯಲ್ಲ, ಬದಲಿಗೆ ನಿರ್ಲಕ್ಷಿತ ಸಮುದಾಯಗಳನ್ನು ಮೇಲೆತ್ತುವ ಸಂವಿಧಾನಾತ್ಮಕ ಆಶಯದ ಭಾಗ,” ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ಉರ್ದು ಮಾಧ್ಯಮದ ಮಕ್ಕಳು ಇತರರೊಂದಿಗೆ ಸಮಾನವಾಗಿ ಬೆಳೆಯಲು ಇಂತಹ ಸಣ್ಣ ಪ್ರೋತ್ಸಾಹಗಳು ಅಗತ್ಯವಾಗಿದ್ದು, ಇದನ್ನು ವಿರೋಧಿಸುವವರು ಸಮಾನತೆಯ ವಿರೋಧಿಗಳು ಎಂದು ಅವರು ಟೀಕಿಸಿದ್ದಾರೆ.

You may also like

Leave a Comment