ಗಡಿನಾಡಿನಲ್ಲಿ ಕೇರಳ ಶೈಲಿಯ ನಾಲ್ಕಂಕಣದ ಮೆಟ್ಟಿಲು ಕೆರೆ: ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ಐತಿಹಾಸಿಕ ನಿರ್ಮಾಣ
ಕುಂಭಳೆ, ಫೆ.25: ಕಾಸರಗೋಡು–ಮಂಜೇಶ್ವರ ಗಡಿಭಾಗದಲ್ಲಿ ಕೇರಳದ ಪರಂಪರೆಯ ಪುಷ್ಕರಿಣಿ ಶೈಲಿಯ ನಾಲ್ಕಂಕಣದ ಮೆಟ್ಟಿಲು ಕೆರೆ ನಿರ್ಮಾಣ ಕಾರ್ಯಕ್ಕೆ ವೇಗ ಬಂದಿದೆ. ಅತ್ಯುತ್ತರ ಕೇರಳದ ವಾಣಿಯ–ಗಾಣಿಗ ಸಮಾಜದ ಆರಾಧನಾ ಕೇಂದ್ರವಾದ ಪೆರ್ಣೆ ಮುಚ್ಚಿಲೋಟ್ ಭಗವತಿ ಸನ್ನಿಧಿಯಲ್ಲಿ ಈ ವಿಶಿಷ್ಟ ಕೆರೆ ನಿರ್ಮಾಣಗೊಳ್ಳುತ್ತಿರುವುದು ಗಡಿನಾಡಿನ ಕ್ಷೇತ್ರ ಇತಿಹಾಸದಲ್ಲೇ ಮೊದಲ ಘಟನೆ ಎಂದು ಹೇಳಲಾಗುತ್ತಿದೆ.
ಕೇರಳದ ಮಲಬಾರ್ ಪ್ರಾಂತ್ಯದಲ್ಲಿ ದೇವಾಲಯಗಳೊಂದಿಗೆ ಸಂಬಂಧಿಸಿದ ಪುಷ್ಕರಿಣಿ ಪರಂಪರೆ ಶತಮಾನಗಳಷ್ಟು ಹಳೆಯದು. ಇದೇ ವಿನ್ಯಾಸದಲ್ಲಿ 24 ಕೋಲು ಉದ್ದ ಹಾಗೂ 24 ಕೋಲು ಅಗಲದ ಮೆಟ್ಟಿಲು ಕೆರೆ ಇಲ್ಲಿ ನಿರ್ಮಾಣಗೊಳ್ಳುತ್ತಿದೆ. ಸುಮಾರು ₹1 ಕೋಟಿಗೂ ಅಧಿಕ ವೆಚ್ಚದಲ್ಲಿ ಈ ಕಾಮಗಾರಿ ನಡೆಯುತ್ತಿದ್ದು, ಕೆರೆಯ ಸುತ್ತಲೂ ವಿಶಿಷ್ಟ ಆಕೃತಿಗಳ ಮೆಟ್ಟಿಲು ವಿನ್ಯಾಸಕ್ಕೆ ಒಂದು ಲಕ್ಷಕ್ಕೂ ಅಧಿಕ ಕಲ್ಲು ತುಂಡುಗಳ ಅಗತ್ಯವಿದೆ.
ಇತಿಹಾಸದ ಹಿನ್ನೆಲೆ
ಪೆರ್ಣೆ ಮುಚ್ಚಿಲೋಟ್ ಕ್ಷೇತ್ರದಲ್ಲಿ ಹಿಂದೆ ಪುಷ್ಕರಿಣಿ ಇತ್ತು. ಭಕ್ತರು ಕೆರೆ ದಂಡೆಯಲ್ಲಿ ನಡೆದು ಕ್ಷೇತ್ರ ಪ್ರವೇಶಿಸುವ ಪದ್ಧತಿ ರೂಢಿಯಲ್ಲಿತ್ತು. ಕಾಲಕ್ರಮೇಣ ಅಪಾಯಕಾರಿತ್ವದ ಕಾರಣದಿಂದ ಸುಮಾರು 60–70 ವರ್ಷಗಳ ಹಿಂದೆ ಆ ಕೆರೆಯನ್ನು ಮುಚ್ಚಲಾಗಿತ್ತು. ನಂತರ ತೋಡಿದ ಮತ್ತೊಂದು ಕೆರೆ ಜೇಡಿ ಮಣ್ಣಿನ ಸಮಸ್ಯೆಯಿಂದ ಸ್ಥಿರವಾಗದೆ 1995–96ರ ಅವಧಿಯಲ್ಲಿ ಅದನ್ನೂ ಮುಚ್ಚಬೇಕಾಯಿತು.
ಕೋವಿಡ್ ನಂತರ ನಡೆದ ಪ್ರಶ್ನಾ ಚಿಂತನೆ ಸಂದರ್ಭದಲ್ಲಿ ಪರಂಪರೆಯ ಕೆರೆ ನಾಶಗೊಂಡಿರುವುದಕ್ಕೆ ಪುನರ್‌ನಿರ್ಮಾಣ ಅಗತ್ಯವೆಂಬ ದೇವಿಯಾಣತಿ ದೊರಕಿದ ಹಿನ್ನೆಲೆಯಲ್ಲಿ ಸಮಿತಿ ರಚಿಸಿ ಹೊಸ ಕೆರೆ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಹಳೆಯ ಕೆರೆ ಮುಚ್ಚಿದ ಸ್ಥಳದಲ್ಲಿ ಪ್ರಾಯಶ್ಚಿತ್ತ ವಿಧೇಯ “ಕೂತ–ಖನನ–ಶಾಂತಿ ಹೋಮ” ನೆರವೇರಿಸಿ, ಹೊಸ ಸ್ಥಳ ನಿರ್ಧರಿಸಿ ಕಾಮಗಾರಿ ಆರಂಭಿಸಲಾಗಿದೆ.
ನಿರ್ಮಾಣದ ವೈಶಿಷ್ಟ್ಯ
ಕೇರಳ ಶೈಲಿಯ ಪುಷ್ಕರಿಣಿ ನಿರ್ಮಾಣವು ತಾಂತ್ರಿಕ ಕೌಶಲ್ಯ ಬೇಡುವ ಪ್ರಕ್ರಿಯೆ. ಮೊದಲು ಪೆಟ್ಟಿಗೆ ಆಕಾರದಲ್ಲಿ ಕೆರೆ ತಯಾರಿಸಿ, ನಂತರ ಒಳಭಾಗದಲ್ಲಿ ನಿರ್ದಿಷ್ಟ ಅಳತೆ ಹಾಗೂ ವಿನ್ಯಾಸದ ಕಲ್ಲುಗಳನ್ನು ಹಾಸಿ ಜೋಡಿಸುವುದು ರೂಢಿ. ಒಂದಿಂಚು ಆಯ ತಪ್ಪಿದರೂ ವಿನ್ಯಾಸ ಹಾನಿಯಾಗುವ ಸಾಧ್ಯತೆ ಇರುವುದರಿಂದ ಅನುಭವಜ್ಞ ಕಾರ್ಮಿಕರನ್ನು ನೇಮಕ ಮಾಡಲಾಗಿದೆ.
ಕಾಞಂಗಾಡು ಬಳಿಯ ಚಾಲಿಂಗಾಲ್ ಶಶಿ ಶಿಲ್ಪಿಯ ನಿರ್ದೇಶನದಂತೆ ಅಳತೆ ಹಾಗೂ ವಿನ್ಯಾಸ ರೂಪುಗೊಳ್ಳುತ್ತಿದ್ದರೆ, ಚೆರುವತ್ತೂರಿನ ಶಶಿಧರನ್ ಮಣಿಯಾಣಿ ಕಲ್ಲಿನ ಮೆಟ್ಟಿಲುಗಳ ಪುಷ್ಕರಿಣಿ ವಿನ್ಯಾಸದ ಹೊಣೆ ಹೊತ್ತಿದ್ದಾರೆ. ಪೆರ್ಣೆ ಕ್ಷೇತ್ರದ ಮುಂಭಾಗದಲ್ಲೇ ಕಲ್ಲು ಕಡಿತ ಹಾಗೂ ವಿನ್ಯಾಸಗೊಳಿಸುವ ಕಾರ್ಯ ನಡೆಯುತ್ತಿದೆ.
ಕಾಮಗಾರಿ ಪ್ರಗತಿ
ಎರಡು ವಾರಗಳ ಹಿಂದೆ ಆರಂಭವಾದ ಕೆರೆ ತೋಡುವ ಕೆಲಸ ಈಗಾಗಲೇ ಶೇ.50ರಷ್ಟು ಪೂರ್ಣಗೊಂಡಿದೆ. ಮಾರ್ಚ್ ಅಂತ್ಯ ಅಥವಾ ಏಪ್ರಿಲ್ ಆರಂಭಕ್ಕೆ ಕಾಮಗಾರಿ ಸಂಪೂರ್ಣಗೊಳ್ಳುವ ನಿರೀಕ್ಷೆ ಇದೆ. ಉತ್ತರ ಕೇರಳದಲ್ಲಿ ಇಂಥ ಕೆರೆ ನಿರ್ಮಾಣಕ್ಕೆ ಸಾಮಾನ್ಯವಾಗಿ ಒಂದು ಅಥವಾ ಎರಡು ವರ್ಷ ಬೇಕಾಗುತ್ತದೆ ಎನ್ನಲಾಗುತ್ತಿದೆಯಾದರೂ, ಇಲ್ಲಿ ವೇಗವಾಗಿ ಕೆಲಸ ಸಾಗುತ್ತಿದೆ.
ಭಕ್ತರ ಬಳಕೆ
ಈ ಪುಷ್ಕರಿಣಿ ಸ್ನಾನಕ್ಕಾಗಿ ಅಲ್ಲ. ಭಕ್ತರು ಪಾದಸ್ಪರ್ಶಿಸಿ ತಲೆಗೆ ಪ್ರೋಕ್ಷಣೆ ಮಾಡುವ ಉದ್ದೇಶಕ್ಕೆ ಮಾತ್ರ ಬಳಸಲಾಗುತ್ತದೆ. ಜೊತೆಗೆ ಇದು ಪ್ರಾಣಿ–ಪಕ್ಷಿಗಳಿಗೂ ಜಲಮೂಲವಾಗಲಿದೆ.
ಕೆರೆ ನಿರ್ಮಾಣ ಸಮಿತಿ ಸಂಚಾಲಕ ಗೋಪಾಲಕೃಷ್ಣ ಮಾಸ್ತರ್ ಪಂಜತ್ತೊಟ್ಟಿ ಅವರ ಪ್ರಕಾರ, “ಗಡಿನಾಡಿನ ದೇವಾಲಯವೊಂದರಲ್ಲಿ ಕೇರಳ ಶೈಲಿಯ ಇಂಥ ಪುಷ್ಕರಿಣಿ ನಿರ್ಮಾಣವಾಗುವುದು ಇದೇ ಮೊದಲು. ಕೆರೆ ಪೂರ್ಣಗೊಂಡ ಬಳಿಕ ಕ್ಷೇತ್ರದ ಸೌಂದರ್ಯ ಹಾಗೂ ಆಧ್ಯಾತ್ಮಿಕ ಕಳೆ ಮತ್ತಷ್ಟು ಹೆಚ್ಚಲಿದೆ.”
ಒಟ್ಟಿನಲ್ಲಿ, ಪರಂಪರೆ–ಆಚಾರ–ಶಿಲ್ಪ ವೈಶಿಷ್ಟ್ಯಗಳನ್ನು ಒಟ್ಟುಗೂಡಿಸುವ ಈ ಮೆಟ್ಟಿಲು ಕೆರೆ ಪೆರ್ಣೆ ಕ್ಷೇತ್ರದ ಗುರುತಾಗಿ ರೂಪುಗೊಳ್ಳಲಿದೆ.
ಕೃಪೆ: ನಾ ಚಂಬಲ್ತಿಮಾರ್,ಕಣಿಪುರ ಮ್ಯಾಗಜಿನ್