ಇನ್ಮೇಲೆ ಸಿಗಲ್ಲ ಪೆಟ್ರೋಲ್…! ಸುಳ್ಳು ಸುದ್ದಿಗೆ ಬೆಚ್ಚಿದ ಭಟ್ಕಳ: ತೈಲ ಅಭಾವದ ಭೀತಿಯಲ್ಲಿ ಪೆಟ್ರೋಲ್ ಸಂಗ್ರಹಕ್ಕೆ ಮುಗಿಬಿದ್ದ ಜನರು.
ಭಟ್ಕಳ, ಮಾ.4: ಇರಾನ್–ಇಸ್ರೇಲ್–ಅಮೆರಿಕ ನಡುವಿನ ಯುದ್ಧದ ಆತಂಕಕ್ಕೆ ಸಂಬಂಧಿಸಿದ ವದಂತಿಗಳು ಭಟ್ಕಳ ಪಟ್ಟಣದಲ್ಲಿ ಪೆಟ್ರೋಲ್ ಪ್ಯಾನಿಕ್ ಸೃಷ್ಟಿಸಿವೆ. ತೈಲ ಬೆಲೆ ಏಕಾಏಕಿ ಏರಿಕೆಯಾಗಬಹುದು ಅಥವಾ ಪೂರೈಕೆ ಸ್ಥಗಿತಗೊಳ್ಳಬಹುದು ಎಂಬ ಸುಳ್ಳು ಸುದ್ದಿಯನ್ನು ನಂಬಿದ ಜನರು ಪೆಟ್ರೋಲ್ ಬಂಕ್‌ಗಳತ್ತ ಧಾವಿಸಿದ್ದು, ಹಲವು ಕಡೆ ನೂಕುನುಗ್ಗಲು ಕಂಡುಬಂದಿದೆ.
ಪಟ್ಟಣದ ಪ್ರಮುಖ ಪೆಟ್ರೋಲ್ ಪಂಪ್‌ಗಳಲ್ಲಿ ವಾಹನ ಸವಾರರು ದೀರ್ಘ ಸಾಲಿನಲ್ಲಿ ನಿಂತಿದ್ದು, ಕೆಲವೇ ಗಂಟೆಗಳಲ್ಲಿ ಮೂರುಕ್ಕೂ ಹೆಚ್ಚು ಬಂಕ್‌ಗಳಲ್ಲಿ ಪೆಟ್ರೋಲ್ ಸಂಪೂರ್ಣ ಖಾಲಿಯಾಗಿದೆ. ಕೆಲವರು ವಾಹನಗಳಿಗೆ ಮಾತ್ರವಲ್ಲದೆ ಪ್ಲಾಸ್ಟಿಕ್ ಕ್ಯಾನ್‌ಗಳಲ್ಲಿಯೂ ಲೀಟರ್‌ಗಟ್ಟಲೆ ಪೆಟ್ರೋಲ್ ಸಂಗ್ರಹಿಸುತ್ತಿರುವುದು ಗಮನಕ್ಕೆ ಬಂದಿದೆ.
ಭಟ್ಕಳದಲ್ಲಿ ಪೆಟ್ರೋಲ್ ಲಭ್ಯತೆ ಕಡಿಮೆಯಾಗುತ್ತಿದ್ದಂತೆ ಜನರು ನೆರೆಯ ಹೊನ್ನಾವರ ಹಾಗೂ ಉಡುಪಿ ಜಿಲ್ಲೆಯ ಕುಂದಾಪುರ ಭಾಗದ ಪೆಟ್ರೋಲ್ ಬಂಕ್‌ಗಳಿಗೆ ತೆರಳಿ ಇಂಧನ ಪಡೆಯುತ್ತಿರುವುದು ಕಂಡುಬಂದಿದೆ.
ಇದೀಗ ತೈಲ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಿಲ್ಲ ಮತ್ತು ಬೆಲೆ ಏರಿಕೆಯ ಬಗ್ಗೆ ಅಧಿಕೃತ ಮಾಹಿತಿ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸುಳ್ಳು ಸುದ್ದಿಗಳನ್ನು ನಂಬಿ ಅನಗತ್ಯ ಆತಂಕಕ್ಕೊಳಗಾಗಬಾರದು ಎಂದು ಸಾರ್ವಜನಿಕರಿಗೆ ಮನವಿ ಮಾಡಿರುವ ಅವರು, ಅತಿಯಾದ ಸಂಗ್ರಹಣೆಯಿಂದ ಕೃತಕ ಅಭಾವ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.