ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರಿನಲ್ಲಿ ನರ್ಸರಿ ಪುಟಾಣಿಗಳಿಂದ ” ನಮ್ಮ ನಡೆ ಹಳ್ಳಿ ಕಡೆ ” ಕಾರ್ಯಕ್ರಮ
ಕಾಣಿಯೂರು:-ಆಧುನಿಕತೆಯ ಭರಾಟೆಯಲ್ಲಿ ನಮ್ಮತನವನ್ನು ಕಳೆದುಕೊಳ್ಳುವಂತಹ ಈ ಸಂದರ್ಭದಲ್ಲಿ ಎಳೆಯ ಮಕ್ಕಳಲ್ಲಿ ನಮ್ಮ ಹಿಂದಿನ ಸಂಸ್ಕೃತಿ ,ಆಚಾರ ವಿಚಾರಗಳ ಬಗ್ಗೆ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರಿನಲ್ಲಿ “ನಮ್ಮ ನಡೆ ಹಳ್ಳಿ ಕಡೆ” ಎಂಬ ವಿಶಿಷ್ಟ, ವಿಭಿನ್ನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಮಾನ್ಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ ತುಳಸಿ ಕಟ್ಟೆಗೆ ದೀಪ ಹಚ್ಚುವ ಮೂಲಕ, ಪೋಷಕ ಬಂಧು ಸುನಿಲ್ ಕುಮಾರ್ ರೈ ಪೆರುವಾಜೆ ತುಳಸಿ ಕಟ್ಟೆಗೆ ನೀರು ಎರೆಯುವ ಮೂಲಕ, ಮುಖ್ಯಗುರು ನಾರಾಯಣ ಭಟ್ ಮನೆ ದೇವರಿಗೆ ದೀಪ ಹಚ್ಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.ಮಕ್ಕಳು ಇದುವರೆಗೆ ಕಂಡರಿಯದ ಸೋಗೆಯ ಮನೆ, ಮಣ್ಣಿನ ತುಳಸಿ ಕಟ್ಟೆ, ಲ್ಯಾಂಪ್, ಬಾವಿಕಟ್ಟೆ, ರಾಗಿ ಬೀಸುವ ಕಲ್ಲು, ಚೆನ್ನೆಮಣೆ ಆಟ , ಇಸ್ತ್ರಿ ಪೆಟ್ಟಿಗೆ, ಮಕ್ಕಳನ್ನು ಮಲಗಿಸುವ ಜೋಳಿಗೆ, ಮೊಸರು ಕಡೆಯುವ ಸಾಧನ, ಅಡಿಕೆ ಹಾಳೆಯಲ್ಲಿ ಕೂತು ಮಕ್ಕಳನ್ನು ಎಳೆಯುವುದು, ಲಗೋರಿ ಆಟ, ಕಲ್ಲಾಟ, ಗಾಜಿನ ಬಳೆ ಚೂರಿನ ಆಟ, ಅಲ್ಲದೆ ಹಲವಾರು ಹಳೆಯ ಕಾಲದ ವಸ್ತುಗಳ ಸಂಗ್ರಹವನ್ನು ನೋಡಿ ಆನಂದಿಸಿದರು. ತೆಂಗಿನ ಮಡಲಿನಿಂದ ಮಾಡಿದಂತಹ ಮುಖ್ಯದ್ವಾರ, ಮಡಲಿನಿಂದ ಮಾಡಿದ ಕಮಾನು , ಹಳೆ ವಸ್ತುಗಳನ್ನು ಜೋಡಿಸಿದ ರೀತಿ ಆಕರ್ಷಣೀಯವಾಗಿತ್ತು.ಈ ಸಂದರ್ಭದಲ್ಲಿ ಶಾಲಾ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ, ಸಹ ಆಡಳಿತಾಧಿಕಾರಿ ಹೇಮಾನಾಗೇಶ್ ರೈ, ಕನ್ನಡ ಮಾಧ್ಯಮದ ಮುಖ್ಯಗುರು ವಿನಯ ವಿ ಶೆಟ್ಟಿ, ಕನ್ನಡ ಮಾಧ್ಯಮದ ಸಹ ಮುಖ್ಯಸ್ಥೆ ಅನಿತಾ ಜೆ ರೈ, ಹಿರಿಯ ಶಿಕ್ಷಕಿ ಸವಿತಾ ಕೆ, ನೃತ್ಯಗುರು ಪ್ರಮೋದ್ ಕುಮಾರ್ ರೈ ಕಲಾಮಂದಿರ್ ಬೆಳ್ಳಾರೆ ಮತ್ತು ಶಿಕ್ಷಕ- ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.

ನರ್ಸರಿ ಶಿಕ್ಷಕಿಯರಾದ ಸುಚೇತ, ಪ್ರತಿಭಾ, ರಚನಾ, ಕವಿತಾ ಎಚ್ ರೈ, ಸವಿತಾ ಎಸ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿದರು.