ಹನುಮಗಿರಿ ಕ್ಷೇತ್ರದಲ್ಲಿ ಎಪ್ರಿಲ್ 9ರಿಂದ 12ರವರೆಗೆ ಬ್ರಹ್ಮಕಲಶೋತ್ಸವ: ಶ್ರೀರಾಮ–ಹನುಮ ಜ್ಯೋತಿ ರಥಕ್ಕೆ ಎ.8ರಂದು ಸುಳ್ಯ ತಾಲೂಕಿಗೆ ಭವ್ಯ ಸ್ವಾಗತ
ಪುತ್ತೂರು ತಾಲೂಕಿನ ಈಶ್ವರಮಂಗಲದಲ್ಲಿರುವ ಹನುಮಗಿರಿ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಎಪ್ರಿಲ್ 9ರಿಂದ 12ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ.
ಈ ಮಹೋತ್ಸವದ ಅಂಗವಾಗಿ ಅಯೋಧ್ಯೆಯಿಂದ ಹೊರಟಿರುವ ಶ್ರೀರಾಮ–ಹನುಮ ಜ್ಯೋತಿ ರಥವು ಎಪ್ರಿಲ್ 8ರಂದು ಸುಳ್ಯ ತಾಲೂಕಿಗೆ ಆಗಮಿಸಲಿದ್ದು, ಭಕ್ತರಿಂದ ಅದ್ದೂರಿ ಸ್ವಾಗತ ಲಭಿಸುವ ನಿರೀಕ್ಷೆಯಿದೆ.
ಬ್ರಹ್ಮಕಲಶೋತ್ಸವ ಪ್ರಯುಕ್ತ ಹಮ್ಮಿಕೊಂಡಿರುವ ಶ್ರೀ ಕೋಟಿರಾಮ ತಾರಕ ಮಹಾಜಪಯಜ್ಞ ಹಾಗೂ ಲಕ್ಷೋತ್ತರ ನಾರಿಕೇಳ ಸಮರ್ಪಣೆಯಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕ್ಷೇತ್ರದ ಆಡಳಿತ ಧರ್ಮದರ್ಶಿ ನವ್ಯ ಅಚ್ಚುತ ಮೂಡೆತ್ತಾಯ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷ ಎಸ್.ಎಸ್.ಎನ್. ಮನ್ಮಥ ಅವರು ವಿನಂತಿಸಿದ್ದಾರೆ.
ಈ ಕುರಿತು ಮಾ.21ರಂದು ಸುಳ್ಯ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನವ್ಯ ಅಚ್ಚುತ ಮೂಡೆತ್ತಾಯರು ಬ್ರಹ್ಮಕಲಶೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ವಿವರಗಳನ್ನು ಹಂಚಿಕೊಂಡರು.