ಸುಳ್ಯ ನಗರ ಪಂಚಾಯತ್ ಬಜೆಟ್ ಮಂಡನೆ: ₹2.66 ಕೋಟಿ ಮಿಗತೆ ನಿರೀಕ್ಷೆ
ಸುಳ್ಯ: ಸುಳ್ಯ ನಗರ ಪಂಚಾಯತ್‌ನ 2026-27ನೇ ಸಾಲಿನ ಆಯವ್ಯಯವನ್ನು ಮಾರ್ಚ್ 27ರಂದು ಮಂಡಿಸಲಾಯಿತು. ನಗರ ಪಂಚಾಯತ್ ಆಡಳಿತಾಧಿಕಾರಿ ಹಾಗೂ ತಹಶೀಲ್ದಾರ್ ಎಂ. ಮಂಜುಳಾ ಅವರು ಬಜೆಟ್ ಮಂಡಿಸಿದರು.
ಆರಂಭಿಕ ಶಿಲ್ಕು ₹4,57,03,609 ಸೇರಿ, ಪ್ರಸ್ತುತ ವರ್ಷಕ್ಕೆ ಒಟ್ಟು ₹13,59,41,892 ಆದಾಯ ಮತ್ತು ₹10,93,05,457 ವೆಚ್ಚ ನಿರೀಕ್ಷಿಸಲಾಗಿದ್ದು, ₹2,66,36,435 ಮಿಗತೆ ಬಜೆಟ್ ಅಂದಾಜಿಸಲಾಗಿದೆ.
ಬಜೆಟ್‌ನಲ್ಲಿ ವಿವಿಧ ಅನುದಾನಗಳು ಪ್ರಮುಖವಾಗಿದ್ದು, ಎಸ್‌ಎಫ್‌ಸಿ ವೇತನ ಅನುದಾನ ₹83 ಲಕ್ಷ, ವಿದ್ಯುತ್ ಅನುದಾನ ₹1.45 ಕೋಟಿ, 16ನೇ ಹಣಕಾಸು ಆಯೋಗ ಅನುದಾನ ₹1.85 ಕೋಟಿ ಸೇರಿದಂತೆ ಒಟ್ಟು ₹4.28 ಕೋಟಿ ಅನುದಾನ ನಿರೀಕ್ಷಿಸಲಾಗಿದೆ. ಜೊತೆಗೆ, ಸ್ವಂತ ಆದಾಯವಾಗಿ ₹4.74 ಕೋಟಿ ಸಂಗ್ರಹಿಸುವ ಗುರಿ ಹೊಂದಲಾಗಿದೆ.
ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ₹2 ಕೋಟಿ, ರಸ್ತೆ ಹಾಗೂ ಪಾದಚಾರಿ ಮಾರ್ಗಗಳಿಗೆ ₹1.28 ಕೋಟಿ, ನೀರು ಸರಬರಾಜು ಮತ್ತು ವಿದ್ಯುತ್ ವೆಚ್ಚಕ್ಕೆ ₹1.28 ಕೋಟಿ, ಭೂಸ್ವಾಧೀನಕ್ಕೆ ₹40 ಲಕ್ಷ ಸೇರಿದಂತೆ ವಿವಿಧ ಅಭಿವೃದ್ಧಿ ಮತ್ತು ನಿರ್ವಹಣಾ ಕಾರ್ಯಗಳಿಗೆ ಒಟ್ಟು ₹10.93 ಕೋಟಿ ವೆಚ್ಚ ನಿರೀಕ್ಷಿಸಲಾಗಿದೆ.
ನಗರ ಅಭಿವೃದ್ಧಿ, ಮೂಲಸೌಕರ್ಯ ಸುಧಾರಣೆ ಮತ್ತು ಘನ ತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಿರುವುದು ಈ ಬಜೆಟ್‌ನ ವಿಶೇಷವಾಗಿದೆ.