Home Uncategorizedಪೆರಾಜೆ ಸಮೀಪ ಬಾವಿಗೆ ಬಿದ್ದ ಕಾಡಾನೆ ರಕ್ಷಣೆ – ಅರಣ್ಯ ಇಲಾಖೆಯ ಯಶಸ್ವಿ ಕಾರ್ಯಾಚರಣೆ

ಪೆರಾಜೆ ಸಮೀಪ ಬಾವಿಗೆ ಬಿದ್ದ ಕಾಡಾನೆ ರಕ್ಷಣೆ – ಅರಣ್ಯ ಇಲಾಖೆಯ ಯಶಸ್ವಿ ಕಾರ್ಯಾಚರಣೆ

by anamika

🔰 ಪೆರಾಜೆ ಸಮೀಪ ಬಾವಿಗೆ ಬಿದ್ದ ಕಾಡಾನೆ ರಕ್ಷಣೆ – ಅರಣ್ಯ ಇಲಾಖೆಯ ಯಶಸ್ವಿ ಕಾರ್ಯಾಚರಣೆ 🔰

ಸುಳ್ಯ ತಾಲೂಕಿನ ಪೆರಾಜೆ ಸಮೀಪದ ಕಲ್ಚರ್ಪೆ ಪ್ರದೇಶದಲ್ಲಿ ಸುಮಾರು 25 ಅಡಿ ಆಳದ ಪಾಳುಬಿದ್ದ ಬಾವಿಗೆ ಬಿದ್ದಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ರಕ್ಷಿಸಿದೆ.

ಸುಮಾರು 20-22 ವರ್ಷ ಪ್ರಾಯದ ಗಂಡಾನೆ ಭಾನುವಾರ ತಡರಾತ್ರಿ ಸುಮಾರು 11:30ರ ವೇಳೆಗೆ ರಾಮ ನಾಯ್ಕ ಅವರ ತೋಟದ ಅಂಚಿನಲ್ಲಿದ್ದ ಬಾವಿಗೆ ಬಿದ್ದಿತ್ತು. ಆನೆಯ ಚೀರಾಟ ಕೇಳಿದ ಮನೆಯವರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸೋಮವಾರ ಬೆಳಗ್ಗೆ 6 ಗಂಟೆಗೆ ರಕ್ಷಣಾ ಕಾರ್ಯಾಚರಣೆ ಆರಂಭಗೊಂಡಿತು. ಹಿಟಾಚಿ ಯಂತ್ರದ ಸಹಾಯದಿಂದ ಬಾವಿಯ ಒಂದು ಬದಿಯಲ್ಲಿ ಇಳಿಜಾರು ದಾರಿ ನಿರ್ಮಿಸಿ ಆನೆ ಮೇಲಕ್ಕೆ ಬರಲು ಅನುಕೂಲ ಮಾಡಿಕೊಡಲಾಯಿತು. ಸುಮಾರು ಏಳು ಗಂಟೆಗಳ ಸುದೀರ್ಘ ಪ್ರಯತ್ನದ ಬಳಿಕ ಮಧ್ಯಾಹ್ನ 12:50ರ ಸುಮಾರಿಗೆ ಆನೆ ಸುರಕ್ಷಿತವಾಗಿ ಹೊರಬಂದಿತು.

ಬಾವಿಯಿಂದ ಹೊರಬಂದ ನಂತರ ಆನೆ ರಾಷ್ಟ್ರೀಯ ಹೆದ್ದಾರಿಯತ್ತ ಚಲಿಸಿದ ಕಾರಣ ಕೆಲಕಾಲ ಆತಂಕ ಉಂಟಾಯಿತು. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿ ಆನೆಯನ್ನು ಜನವಸತಿ ಪ್ರದೇಶದಿಂದ ದೂರ ಓಡಿಸಿದರು. ಕೊನೆಗೆ ಆನೆ ಪೂಮಲೆ ಅರಣ್ಯ ವಲಯದತ್ತ ತೆರಳಿತು.

ಈ ಕಾರ್ಯಾಚರಣೆ ಸಿಸಿಎಫ್ ಕಾರಿಕಾಲನ್ ಹಾಗೂ ಡಿಎಫ್‌ಒ ಆಂಥೋನಿ ಮರಿಯಪ್ಪ ಅವರ ಮಾರ್ಗದರ್ಶನದಲ್ಲಿ ನಡೆಯಿತು. ವಿವಿಧ ಅರಣ್ಯ ಅಧಿಕಾರಿಗಳು, ಪೊಲೀಸ್, ಅಗ್ನಿಶಾಮಕ ದಳ ಹಾಗೂ ಪಶುವೈದ್ಯಾಧಿಕಾರಿಗಳು ಸಹಕರಿಸಿ ಯಶಸ್ವಿ ರಕ್ಷಣಾ ಕಾರ್ಯ ನಡೆಸಿದರು.

👉 ಜನಸಂದಣಿ ನಿಯಂತ್ರಣ ಮತ್ತು ತ್ವರಿತ ಕ್ರಮದಿಂದ ದೊಡ್ಡ ಅನಾಹುತ ತಪ್ಪಿದಂತಾಯಿತು.

.

You may also like

Leave a Comment