Home Uncategorizedಸಾವಿನಲ್ಲೂ ಕಣ್ಣು ಮತ್ತು ಕಿಡ್ನಿ ದಾನ ಮಾಡಿ ಸಾರ್ಥಕತೆ ಮೆರೆದ ಪುಟ್ಟ ಕಂದ ಅನ್ವಿಕ್

ಸಾವಿನಲ್ಲೂ ಕಣ್ಣು ಮತ್ತು ಕಿಡ್ನಿ ದಾನ ಮಾಡಿ ಸಾರ್ಥಕತೆ ಮೆರೆದ ಪುಟ್ಟ ಕಂದ ಅನ್ವಿಕ್

by anamika

ಸಾವಿನಲ್ಲೂ ಕಣ್ಣು ಮತ್ತು ಕಿಡ್ನಿ ದಾನ ಮಾಡಿ ಸಾರ್ಥಕತೆ ಮೆರೆದ ಪುಟ್ಟ ಕಂದ ಅನ್ವಿಕ್

ಕೊಡಗು : ನಾಲ್ಕು ವರ್ಷ ಪ್ರಾಯದ ಈ ಪುಟ್ಟ ಕಂದ ಅನ್ವಿಕ್ ಪೋಷಕರ ಹಾರೈಕೆ ಹಾಗೂ ಸಹಪಾಠಿಗಳೊಂದಿಗೆ ಆಟವಾಡುತ್ತಾ ಬಾಲ್ಯ ಕಳೆದು ಶಿಕ್ಷಣ ಪಡೆದು ಭವ್ಯ ಭವಿಷ್ಯದೊಂದಿಗೆ ಬಾಳಿ ಬದುಕಬೇಕಾಗಿತ್ತು. ಆದರೆ ಈತ ಜೀವಿಸುವುದು ಜವರಾಯನಿಗೆ ಹಿಡಿಸಲಿಲ್ಲವೇನೋ…. ಅರಳುವ ಮುನ್ನವೇ ವಿಧಿಯ ಕ್ರೂರ ಅಟ್ಟಹಾಸಕ್ಕೆ ಸಿಲುಕಿ ಅಪಘಾತದಲ್ಲಿ ಉಸಿರು ಚೆಲ್ಲಿದ್ದಾನೆ. ಆದರೆ ಸಾವಿನ ನಂತರವೂ ತನ್ನ ಕಣ್ಣು ಮತ್ತು ಕಿಡ್ನಿಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದಿದ್ದಾನೆ. ಆ ಮೂಲಕ ಜೀವ ಕಿತ್ತುಕೊಂಡ ಯಮನನ್ನೇ ಅನ್ವಿತ್ ತಲೆ ತಗ್ಗಿಸುವಂತೆ ಮಾಡಿದ್ದಾನೆ.

ಕೊಡಗು ಜಿಲ್ಲೆ ಚಿಕ್ಕಅಳುವಾರ ಗ್ರಾಮದ ರಜಿತ್ ಮತ್ತು ರಮ್ಯಾ ದಂಪತಿಯ ಏಕಮಾತ್ರ ಪುತ್ರ ಅನ್ವಿಕ್ (4 ವರ್ಷ ) ಸೋಮವಾರಪೇಟೆ ತಾಲ್ಲೂಕಿನ ಯಡವನಾಡು ಗ್ರಾಮದಲ್ಲಿ ತಾತ ಹರಗ ತಿಮ್ಮಯ್ಯ ಮತ್ತು ಅಜ್ಜಿಯೊಂದಿಗೆ ವಾಸವಿದ್ದ. ಸೋಮವಾರ ಅಜ್ಜಿಯೊಂದಿಗೆ ಸೋಮವಾರಪೇಟೆಗೆ ಹೋಗಿದ್ದಾನೆ. ತದನಂತರ ವಾಪಸು ಬಸ್ಸಿನಲ್ಲಿ ಬಂದು ಯಡವನಾಡಿನ ಬಸ್ ತಂಗುದಾಣದಲ್ಲಿ ಇಳಿದು ರಸ್ತೆ ದಾಟುತ್ತಿದ್ದಾಗ ಕುಶಾಲನಗರ ಕಡೆಯಿಂದ ಯಮರೂಪಿಯಾಗಿ ವೇಗವಾಗಿ ಧಾವಿಸಿಬಂದ ಕಾರು ಡಿಕ್ಕಿ ಹೊಡೆದಿದೆ. ಇದರಿಂದ ತಲೆಗೆ ತೀವ್ರ ಪೆಟ್ಟಾಗಿದ್ದ ಅನ್ವಿಕ್ ನನ್ನು 4 ದಿನಗಳಿಂದ ಮೈಸೂರಿನ ಅಪ್ಪೋಲೋ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಮೆದುಳು ನಿಷ್ಕ್ರಿಯಗೊಂಡು ಚಿಕಿತ್ಸೆ ಫಲಕಾರಿ ಆಗದೇ ನೆನ್ನೆ ರಾತ್ರಿ ಇಹಲೋಕ ತ್ಯಜಿಸಿದ್ದಾನೆ.

ಇದ್ದ ಒಬ್ಬನೇ ಮಗನ ಅಕಾಲಿಕ ಮರಣ ದುಃಖದ ಮಡುವಿನಲ್ಲಿ ಮುಳುಗಿಸಿದ್ದರೂ ಕೂಡ ಪೋಷಕರು ಅನ್ವಿಕ್ ನ ಕಿಡ್ನಿ ಹಾಗೂ ಕಣ್ಣುಗಳನ್ನು ದಾನ ಮಾಡಿದ್ದಾರೆ. ಈ ಉದಾತ್ತ ಕಾರ್ಯದ ಮೂಲಕ ಮಾನವೀಯತೆ ಮೆರೆದು ಅನ್ವಿಕ್ ನಿಗೆ ಸಾರ್ಥಕತೆ ತಂದುಕೊಟ್ಟಿದ್ದಾರೆ.

ಮೃತ ಅನ್ವಿಕ್ ನ ಮೃತದೇಹವನ್ನು ಇಂದು ಮಧ್ಯಾಹ್ನ ಯಡವನಾಡಿನ ತಾತನ ನಿವಾಸಕ್ಕೆ ತಂದು ಅಂತಿಮ ದರ್ಶನದ ನಂತರ ಸಂಜೆ 5 ಗಂಟೆಗೆ ಸ್ವಗೃಹ ಚಿಕ್ಕ ಅಳುವಾರಕ್ಕೆ ಕೊಂಡೊಯ್ಯಲಾಗುವುದು.

ಮೃತ ಅನ್ವಿಕ್ ನ ಆತ್ಮಕ್ಕೆ ಚಿರ ಶಾಂತಿ ಸಿಗಲೆಂದು ಹಾರೈಸುತ್ತೇವೆ.

Vision24

You may also like

Leave a Comment