₹10,000 ಮೇಲ್ಪಟ್ಟ UPI ಪಾವತಿಗೆ 1 ಗಂಟೆ ವಿಳಂಬ: ಡಿಜಿಟಲ್ ವಂಚನೆ ತಡೆಗೆ ಆರ್‌ಬಿಐ ಹೊಸ ಕ್ರಮ
ನವದೆಹಲಿ: ಡಿಜಿಟಲ್ ವಂಚನೆ ಪ್ರಕರಣಗಳನ್ನು ಕಡಿಮೆ ಮಾಡುವ ಉದ್ದೇಶದಿಂದ (RBI) ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ₹10,000 ಕ್ಕಿಂತ ಹೆಚ್ಚು ಮೊತ್ತದ ಯುಪಿಐ (UPI) ಪಾವತಿಗಳಿಗೆ 1 ಗಂಟೆಯ ವಿಳಂಬ ನಿಯಮವನ್ನು ಜಾರಿಗೆ ತರಲು ಪ್ರಸ್ತಾವನೆ ಮಾಡಿದೆ.
ಈ ಕ್ರಮದ ಮುಖ್ಯ ಉದ್ದೇಶ, ವಂಚನೆಗೆ ಒಳಗಾದ ಗ್ರಾಹಕರು ತಮ್ಮ ಹಣವನ್ನು ಕಳೆದುಕೊಳ್ಳುವುದನ್ನು ತಪ್ಪಿಸಲು ಅಗತ್ಯ ಸಮಯ ಒದಗಿಸುವುದು. ಅನೇಕ ಬಾರಿ ಮೋಸಗಾರರು ತಕ್ಷಣವೇ ಹಣ ವರ್ಗಾವಣೆ ಮಾಡಿಸುವ ಮೂಲಕ ಗ್ರಾಹಕರನ್ನು ಸಂಕಷ್ಟಕ್ಕೆ ತಳ್ಳುತ್ತಿರುವ ಹಿನ್ನೆಲೆಯಲ್ಲಿ, ಈ ವಿಳಂಬ ನಿಯಮ ಸುರಕ್ಷತೆಗೆ ಸಹಕಾರಿಯಾಗಲಿದೆ.

ಹೊಸ ನಿಯಮದ ಪ್ರಕಾರ, ₹10,000 ಕ್ಕಿಂತ ಹೆಚ್ಚಿನ ಮೊತ್ತದ ಪಾವತಿ ಮಾಡಿದ ಬಳಿಕ, ಅದು ಅಂತಿಮವಾಗಿ ಸ್ವೀಕರಿಸುವ ಖಾತೆಗೆ ಸೇರುವುದಕ್ಕೆ ಕನಿಷ್ಠ 1 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಈ ಅವಧಿಯಲ್ಲಿ ಗ್ರಾಹಕರು ಅನುಮಾನಾಸ್ಪದ ವ್ಯವಹಾರವನ್ನು ರದ್ದುಪಡಿಸುವ ಅವಕಾಶವೂ ದೊರೆಯಬಹುದು.
ಡಿಜಿಟಲ್ ಪಾವತಿ ವ್ಯವಸ್ಥೆಯ ಸುರಕ್ಷತೆಯನ್ನು ಬಲಪಡಿಸಲು RBI ಈ ಕ್ರಮ ಕೈಗೊಂಡಿದ್ದು, ಶೀಘ್ರದಲ್ಲೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಬ್ಯಾಂಕುಗಳು ಮತ್ತು ಪಾವತಿ ಸೇವಾ ಒದಗಿಸುವ ಸಂಸ್ಥೆಗಳು ಈ ನಿಯಮವನ್ನು ಅನುಸರಿಸಲು ತಯಾರಿ ನಡೆಸುತ್ತಿವೆ.

ಈ ಕ್ರಮದಿಂದ ಗ್ರಾಹಕರಿಗೆ ಹೆಚ್ಚುವರಿ ಭದ್ರತೆ ದೊರೆಯುವ ನಿರೀಕ್ಷೆಯಿದ್ದು, ಡಿಜಿಟಲ್ ವಂಚನೆ ಪ್ರಕರಣಗಳಲ್ಲಿ ಗಣನೀಯ ಇಳಿಕೆ ಕಾಣುವ ಸಾಧ್ಯತೆ ಇದೆ.