ಕಾವೇರಿ ನದಿಯಲ್ಲಿ 6 ಜನ ಜಲಸಮಾಧಿ; ದರ್ಗಾಕ್ಕೆ ಬಂದವರು ದುರಂತ ಅಂತ್ಯ
ಮೈಸೂರು ಜಿಲ್ಲೆಯ ಕೆ.ಆರ್.ನಗರದ ಅರ್ಕೇಶ್ವರ ದೇಗುಲ ಬಳಿಯ ಕಾವೇರಿ ನದಿಯಲ್ಲಿ ಇಂದು ದುರಂತ ಸಂಭವಿಸಿದೆ. ಉರೂಸ್ ಹಿನ್ನೆಲೆ ದರ್ಗಾಕ್ಕೆ ಬಂದಿದ್ದ 8 ಜನರ ತಂಡ ನದಿಯಲ್ಲಿ ಈಜಲು ತೆರಳಿದ್ದು, ಆರು ಮಂದಿ ನೀರುಪಾಲಾಗಿದ್ದಾರೆ. ಕೆ.ಆರ್.ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೈಸೂರು ಜಿಲ್ಲೆಯ ಕೆ.ಆರ್.ನಗರದಲ್ಲಿ ಇಂದು ಉರೂಸ್ ಹಿನ್ನೆಲೆ ದರ್ಗಾಕ್ಕೆ ಬೆಂಗಳೂರು ಮತ್ತು ಊಟಿಯಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಎಂಟು ಜನರ ತಂಡವೊಂದು ಅರ್ಕೇಶ್ವರ ದೇವಸ್ಥಾನದ ಸಮೀಪವಿರುವ ಕಾವೇರಿ ನದಿಗೆ ಈಜಲು ತೆರಳಿದ್ದಾರೆ. ಈ ವೇಳೆ ನದಿಯಲ್ಲಿ ಮುಳುಗಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಇಬ್ಬರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ದುರದೃಷ್ಟವಶಾತ್ ಉಳಿದ ಆರು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಬೆಂಗಳೂರಿನ ಯಾಸಿನ್(23) ಹಾಗೂ ಹೈಮಾ(13), ಊಟಿ ಮೂಲದ 38 ವರ್ಷದ ಸೈದ್ ಫಾತಿಮಾ, ಮೈಸೂರು ಜಿಲ್ಲೆಯ ನೇಹಾ(20), ಉಮೇರ್(7) ಮತ್ತು ಅಫಿಯಾ(20) ಮೃತರು. ಸದ್ಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತದೇಹಗಳನ್ನು ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.