ಮಮತ ದೀದಿಯ ಕೋಟೆಯಲ್ಲಿ ಮೋದಿಗೆ ಒಲಿದ ಮತದಾರರು
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಪ್ರಧಾನಿ ಮೋದಿಯವರ ಗ್ಯಾರಂಟಿ ಮತ್ತು ಅಮಿತ್ ಶಾ ಅವರ ಚುನಾವಣಾ ತಂತ್ರದಿಂದಾಗಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದೆ. ಪಕ್ಷವು ಮಮತಾ ಬ್ಯಾನರ್ಜಿಯವರ 15 ವರ್ಷಗಳ ಆಡಳಿತವನ್ನು ಉರುಳಿಸಿ ರಾಜ್ಯದಲ್ಲಿ ತನ್ನ ಮೊದಲ ಸರ್ಕಾರವನ್ನು ಸ್ಥಾಪಿಸಿದೆ. ಸಾರ್ವಜನಿಕ ಕಲ್ಯಾಣ ಯೋಜನೆಗಳು, ಒಳನುಸುಳುವಿಕೆ ವಿರೋಧಿ ನಿಲುವು ಮತ್ತು ಬಲವಾದ ಬೂತ್ ನಿರ್ವಹಣೆಯು ಮತದಾರರ ವಿಶ್ವಾಸವನ್ನು ಗಳಿಸಿತು. ಇದು ಬಿಜೆಪಿಯ ನಿರ್ಣಾಯಕ ಗೆಲುವಿಗೆ ಕಾರಣವಾಯಿತು ಎನ್ನಬಹುದು.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಸ್ಪಷ್ಟ ಬಹುಮತದ ಸರ್ಕಾರವನ್ನು ರಚಿಸಲು ಸಜ್ಜಾಗಿದೆ. ಇದು ರಾಜ್ಯದಲ್ಲಿ ಬಿಜೆಪಿಯ ಮೊದಲ ಸರ್ಕಾರವಾಗಿದೆ. ಪಶ್ಚಿಮ ಬಂಗಾಳದ ಇತಿಹಾಸದಲ್ಲಿ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತಿರುವುದು ಇದೇ ಮೊದಲು. ಇದು ಬಂಗಾಳದಲ್ಲಿ 15 ವರ್ಷಗಳ ಮಮತಾ ಬ್ಯಾನರ್ಜಿ ಸರ್ಕಾರದ ಅಂತ್ಯವನ್ನು ಸೂಚಿಸುತ್ತದೆ.
ಈ ಬಾರಿ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಬಿಜೆಜೆಪಿಯನ್ನು ಗೆಲ್ಲಿಸಲೇಬೇಕೆಂದು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಖುದ್ದಾಗಿ ಅಖಾಡಕ್ಕೆ ಇಳಿದಿದ್ದರು. ಕಳೆದ 2 ತಿಂಗಳಲ್ಲಿ ಅನೇಕ ಬಾರಿ ನರೇಂದ್ರ ಮೋದಿ ಬಂಗಾಳಕ್ಕೆ ಆಗಮಿಸಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಅಮಿತ್ ಶಾ ಬಂಗಾಳದಲ್ಲೇ ಬೀಡುಬಿಟ್ಟು ರಾಜ್ಯದ ಬಿಜೆಪಿ ನಾಯಕರಿಗೆ ಸಲಹೆ-ಸೂಚನೆಗಳನ್ನು ನೀಡುತ್ತಾ ಬಂಗಾಳದಲ್ಲಿ ಬಿಜೆಪಿ ಪರ ಅಲೆ ಮೂಡಲು ಸಾಕಷ್ಟು ಶ್ರಮಿಸಿದ್ದಾರೆ. ಹೀಗಾಗಿ, ಈ ಗೆಲುವು ಸಿಗಲು ಪಶ್ಚಿಮ ಬಂಗಾಳ ರಾಜ್ಯದ ಬಿಜೆಪಿ ನಾಯಕರಿಗಿಂತ ಹೆಚ್ಚಾಗಿ ಹೈಕಮಾಂಡ್ ನಾಯಕರ ಪರಿಶ್ರಮವೇ ಕಾರಣ ಎನ್ನಬಹುದು. ಹೀಗಾಗಿ, ಬಂಗಾಳದಲ್ಲಿ ಕೂಡ ಬಿಜೆಪಿ ಪ್ರಧಾನಿ ಮೋದಿಯ ಹೆಸರು ಮತ್ತು ಖ್ಯಾತಿಯನ್ನು ಬಳಸಿಕೊಂಡು ಚುನಾವಣೆ ಗೆದ್ದಿದೆ.
ಚುನಾವಣಾ ಪ್ರಚಾರದ ಸಮಯದಲ್ಲಿ, ಪ್ರಧಾನಿ ಮೋದಿ ಹಲವಾರು ಸಾರ್ವಜನಿಕ ರ್ಯಾಲಿಗಳನ್ನು ನಡೆಸಿ ರಾಜ್ಯದಲ್ಲಿ ಬದಲಾವಣೆಗೆ ಕರೆ ನೀಡಿದರು. ಬಂಗಾಳದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಜಾರಿಗೆ ತರುವ ಭರವಸೆ ನೀಡಿದರು. ಹಾಗೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸುಮಾರು 15 ದಿನಗಳ ಕಾಲ ಬಂಗಾಳದಲ್ಲಿಯೇ ಇದ್ದು, ರಾಜ್ಯದ ವಿವಿಧ ಪ್ರದೇಶಗಳಲ್ಲಿ ಸಭೆಗಳನ್ನು ನಡೆಸಿ, ಪ್ರತಿ ವಿಧಾನಸಭಾ ಸ್ಥಾನಕ್ಕೆ ಪ್ರತ್ಯೇಕ ಕಾರ್ಯತಂತ್ರ ರೂಪಿಸಿದರು. ಈ ಕಾರ್ಯತಂತ್ರವು ಈಗ ಚುನಾವಣಾ ಫಲಿತಾಂಶಗಳಲ್ಲಿ ಗೋಚರಿಸುತ್ತಿದೆ.
ಬಿಜೆಪಿ 82,000 ಬೂತ್‌ಗಳಲ್ಲಿ 71,000 ಬೂತ್‌ಗಳ ಮೇಲೆ ನಿಯಂತ್ರಣ ಸಾಧಿಸಿದೆ. ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳನ್ನು ಹೊರತುಪಡಿಸಿ, ಪ್ರತಿಯೊಂದು ಬೂತ್‌ನಲ್ಲಿ ಸಂಘಟನೆಯನ್ನು ಬಲಪಡಿಸಲಾಗಿದೆ. ಹಿಂಸಾಚಾರಕ್ಕೆ ಬಲಿಯಾದ ಕಾರ್ಯಕರ್ತರನ್ನು ಪುನಃ ಸಕ್ರಿಯಗೊಳಿಸುವ ಮೂಲಕ ಬಿಜೆಪಿ ತುಳಿತಕ್ಕೆ ಒಳಗಾದವರನ್ನು ತನ್ನ ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಂಡಿತು.
ಅಮಿತ್ ಶಾ ಅವರ ಮೇಲ್ವಿಚಾರಣೆಯಲ್ಲಿ ಕೇಂದ್ರ ನಾಯಕರಿಗೆ ಸ್ಥಾನವಾರು ಜವಾಬ್ದಾರಿಗಳನ್ನು ವಹಿಸಲಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಡ್ರಾಯಿಂಗ್ ರೂಮ್ ಸಭೆಗಳು ಮನೆ ಮನೆಗೆ ಬಿಜೆಪಿ ತಲುಪಲು ಕಾರಣವಾಯಿತು. ಇದಕ್ಕೆ ಆರ್ಎಸ್ಎಸ್ ಕಾರ್ಯಕರ್ತರು ಕೈಜೋಡಿಸಿದ್ದರಿಂದ ಬಿಜೆಪಿಗೆ ಬಹಳ ಸಹಾಯವಾಯಿತು. ಬಿಜೆಪಿಯ ಚುನಾವಣಾ ಪ್ರಚಾರದಲ್ಲಿ ಟಾಲಿವುಡ್ ತಾರೆಯರು ಮತ್ತು ಕಳಂಕಿತ ರಾಜಕಾರಣಿಗಳನ್ನು ದೂರವಿಡಲಾಯಿತು.