Home Uncategorizedಚುನಾವಣಾ ಫಲಿತಾಂಶದ ಬಳಿಕ ಪಶ್ಚಿಮ ಬಂಗಾಳದಲ್ಲಿ ರಕ್ತರಂಜಿತ ಹಿಂಸಾಚಾರ

ಚುನಾವಣಾ ಫಲಿತಾಂಶದ ಬಳಿಕ ಪಶ್ಚಿಮ ಬಂಗಾಳದಲ್ಲಿ ರಕ್ತರಂಜಿತ ಹಿಂಸಾಚಾರ

by anamika

🛑 ಚುನಾವಣಾ ಫಲಿತಾಂಶದ ಬಳಿಕ ಪಶ್ಚಿಮ ಬಂಗಾಳದಲ್ಲಿ ರಕ್ತರಂಜಿತ ಹಿಂಸಾಚಾರ

ಸುವೇಂದು ಅಧಿಕಾರಿ ಆಪ್ತ ಸಹಾಯಕನಿಗೆ ಗುಂಡಿಕ್ಕಿ ಹತ್ಯೆ!

📍 ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ರಾಜ್ಯದಲ್ಲಿ ರಾಜಕೀಯ ಹಿಂಸಾಚಾರ ಭೀಕರ ಸ್ವರೂಪ ಪಡೆದುಕೊಂಡಿದೆ. ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮದ ದೋಹಾರಿಯಾ ಪ್ರದೇಶದಲ್ಲಿ ಬಿಜೆಪಿ ನಾಯಕ ಹಾಗೂ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

🕙 ಬುಧವಾರ ರಾತ್ರಿ ಸುಮಾರು 10.20ರ ವೇಳೆಗೆ ಬಾರಾಸಾತ್‌ನಲ್ಲಿರುವ ಮನೆಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ, ಚಂದ್ರನಾಥ್ ರಥ್ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಕಾರು ಚಾಲಕನಿಗೂ ಗಾಯಗಳಾಗಿದ್ದು, ಕೋಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

⚡ ಘಟನೆ ತಿಳಿಯುತ್ತಿದ್ದಂತೆಯೇ ಸುವೇಂದು ಅಧಿಕಾರಿ ಆಸ್ಪತ್ರೆಗೆ ಧಾವಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ” ಎಂದು ಆರೋಪಿಸಿದ್ದಾರೆ.

🗣️ ರಾಜ್ಯ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ, “ವಿರೋಧ ಪಕ್ಷದ ನಾಯಕನ ಆಪ್ತ ಸಹಾಯಕನನ್ನೇ ಗುರಿಯಾಗಿಸಿ ಹತ್ಯೆ ಮಾಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು,” ಎಂದು ಆಗ್ರಹಿಸಿದರು.

🇮🇳 ಚಂದ್ರನಾಥ್ ರಥ್ ಅವರು 2018ರಿಂದ ಸುವೇಂದು ಅಧಿಕಾರಿ ಅವರೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಈ ಹಿಂದೆ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದ ಹಿನ್ನೆಲೆ ಹೊಂದಿದ್ದರು.

🔴 ಇತ್ತ ತೃಣಮೂಲ ಕಾಂಗ್ರೆಸ್ ಕೂಡ ಹತ್ಯೆಯನ್ನು ಖಂಡಿಸಿದ್ದು, ಕಳೆದ ಮೂರು ದಿನಗಳಲ್ಲಿ ಬಿಜೆಪಿ ಪ್ರೇರಿತ ಹಿಂಸಾಚಾರದಲ್ಲಿ ತಮ್ಮ ಮೂವರು ಕಾರ್ಯಕರ್ತರು ಮೃತಪಟ್ಟಿದ್ದಾರೆ ಎಂದು ಪ್ರತಿಯಾಗಿ ಆರೋಪಿಸಿದೆ. ಎಲ್ಲಾ ಘಟನೆಗಳಿಗೂ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು ಟಿಎಂಸಿ ಒತ್ತಾಯಿಸಿದೆ.

📌 ಮೇ 4ರಂದು ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ರಾಜ್ಯದ ಹಲವೆಡೆ ಹಲ್ಲೆ, ಬೆದರಿಕೆ ಹಾಗೂ ಕೊಲೆ ಪ್ರಕರಣಗಳು ವರದಿಯಾಗುತ್ತಿವೆ. ಇದುವರೆಗೆ 200ಕ್ಕೂ ಹೆಚ್ಚು ಎಫ್‌ಐಆರ್ ದಾಖಲಾಗಿದ್ದು, 433 ಮಂದಿಯನ್ನು ಬಂಧಿಸಲಾಗಿದೆ ಎಂದು ಡಿಜಿಪಿ ಸಿದ್ಧನಾಥ್ ಗುಪ್ತಾ ತಿಳಿಸಿದ್ದಾರೆ.

You may also like

Leave a Comment