Home Uncategorizedಶಾಲೆ-ಕಾಲೇಜುಗಳಲ್ಲಿ ಹಿಜಾಬ್‌, ಜನಿವಾರಕ್ಕೆ ಅನುಮತಿ

ಶಾಲೆ-ಕಾಲೇಜುಗಳಲ್ಲಿ ಹಿಜಾಬ್‌, ಜನಿವಾರಕ್ಕೆ ಅನುಮತಿ

by anamika

ಶಾಲೆ-ಕಾಲೇಜುಗಳಲ್ಲಿ ಹಿಜಾಬ್‌, ಜನಿವಾರಕ್ಕೆ ಅನುಮತಿ; 2022ರ ಸಮವಸ್ತ್ರ ಆದೇಶ ಹಿಂಪಡೆದ ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯದ ಶಾಲೆ ಹಾಗೂ ಕಾಲೇಜುಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಹಿಜಾಬ್‌ ವಿವಾದಕ್ಕೆ ಸಂಬಂಧಿಸಿ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 2022ರಲ್ಲಿ ಜಾರಿಯಾಗಿದ್ದ ಸಮವಸ್ತ್ರ ಸಂಬಂಧಿತ ಆದೇಶವನ್ನು ಹಿಂಪಡೆದು, ಧಾರ್ಮಿಕ ಹಾಗೂ ಸಾಂಪ್ರದಾಯಿಕ ಸಂಕೇತಗಳನ್ನು ಸಮವಸ್ತ್ರದೊಂದಿಗೆ ಧರಿಸಲು ಅವಕಾಶ ಕಲ್ಪಿಸಿ ಹೊಸ ಮಾರ್ಗಸೂಚಿ ಹೊರಡಿಸಲಾಗಿದೆ.

ಹೊಸ ಆದೇಶದ ಪ್ರಕಾರ ವಿದ್ಯಾರ್ಥಿಗಳು ಸಮವಸ್ತ್ರದ ಜೊತೆಗೆ ಜನಿವಾರ, ಶಿವದಾರ, ರುದ್ರಾಕ್ಷಿ, ಪೇಟ, ತಲೆವಸ್ತ್ರ, ಹಿಜಾಬ್‌ ಸೇರಿದಂತೆ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತ ಸಂಕೇತಗಳನ್ನು ಧರಿಸಬಹುದಾಗಿದೆ. ಆದರೆ ಇವು ಸಮವಸ್ತ್ರದ ಶಿಸ್ತು ಮತ್ತು ಏಕರೂಪತೆಗೆ ಪೂರಕವಾಗಿರಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ತಾರತಮ್ಯರಹಿತ ಹಾಗೂ ಸಾಂವಿಧಾನಿಕ ಸಮತೋಲನ ಕಾಪಾಡುವ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಹಿಜಾಬ್‌ ನಿಷೇಧ ಆದೇಶವನ್ನು ಅಧಿಕೃತವಾಗಿ ಹಿಂಪಡೆಯಲಾಗಿದೆ.

ಆದರೆ ಸಿಂಧೂರ, ಕುಂಕುಮ, ವಿಭೂತಿ, ಕೇಸರಿ ಶಾಲು ಮೊದಲಾದವುಗಳ ಧರಿಸುವಿಕೆ ಕುರಿತು ಹೊಸ ಆದೇಶದಲ್ಲಿ ಯಾವುದೇ ಸ್ಪಷ್ಟ ಉಲ್ಲೇಖ ಮಾಡಿಲ್ಲ.

ಮುಖ್ಯಾಂಶಗಳು:

  • 2022ರ ಸಮವಸ್ತ್ರ ಆದೇಶ ವಾಪಸ್
  • ಹಿಜಾಬ್‌, ಜನಿವಾರ ಸೇರಿದಂತೆ ಸಾಂಪ್ರದಾಯಿಕ ಸಂಕೇತಗಳಿಗೆ ಅವಕಾಶ
  • ಸಮವಸ್ತ್ರದ ಶಿಸ್ತು ಕಾಪಾಡುವುದು ಕಡ್ಡಾಯ
  • ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಹೊಸ ಮಾರ್ಗಸೂಚಿ ಜಾರಿ

 

You may also like

Leave a Comment