Home Uncategorizedಮುಖ್ಯಮಂತ್ರಿಗಳೇ ಹಿಂದೂ ದೇವರುಗಳ ಮೇಲೆ ಇದೆಂತಾ ಕೋಪ-ಜಗ್ಗೇಶ್ ಕಿಡಿ

ಮುಖ್ಯಮಂತ್ರಿಗಳೇ ಹಿಂದೂ ದೇವರುಗಳ ಮೇಲೆ ಇದೆಂತಾ ಕೋಪ-ಜಗ್ಗೇಶ್ ಕಿಡಿ

by Editor

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಮಾನಿಯೊಬ್ಬರು ಭಕ್ತಿಯಿಂದ ನೀಡಿದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಭಾವಚಿತ್ರವನ್ನು ಸ್ವೀಕರಿಸಲು ನಿರಾಕರಿಸಿ ವಾಪಸ್ ನೀಡಿದ ಘಟನೆ ಈಗ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಮತ್ತು ವಿವಾದಕ್ಕೆ ಕಾರಣವಾಗಿದೆ. ಸಿಎಂ ಕಾರಿನಲ್ಲಿ ಸಾಗುತ್ತಿದ್ದ ವೇಳೆ ಸಾರ್ವಜನಿಕರು ಮನವಿ ಸಲ್ಲಿಸಲು ಮುಂದಾದಾಗ ಈ ಘಟನೆ ನಡೆದಿದ್ದು, ರಾಯರ ಫೋಟೋವನ್ನು ಹಿಂತಿರುಗಿಸಿದ ಸಿಎಂ, ಅದೇ ಸಂದರ್ಭದಲ್ಲಿ ಮತ್ತೊಬ್ಬರು ನೀಡಿದ ಚಾಣಕ್ಯನ ಕುರಿತ ಪುಸ್ತಕವನ್ನು ಮಾತ್ರ ಸ್ವೀಕರಿಸಿದ್ದಾರೆ. ಸಿಎಂ ಅವರ ಈ ನಡೆ ಭಕ್ತರ ಭಾವನೆಗೆ ಧಕ್ಕೆ ತಂದಿದೆ ಎಂಬ ಆರೋಪ ಕೇಳಿಬಂದಿದೆ.

ಈ ವಿಚಾರವಾಗಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ದೆಹಲಿಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಿದ್ದರಾಮಯ್ಯ ಅವರಿಗೆ ಹಿಂದೂ ದೇವರುಗಳು ಹಾಗೂ ಸಂಪ್ರದಾಯಗಳ ಮೇಲೆ ಗೌರವವಿಲ್ಲ ಎಂದು ಕಿಡಿಕಾರಿದ್ದಾರೆ. “ಸಿಎಂ ಅವರಿಗೆ ಟೋಪಿ ಕಂಡರೆ ಖುಷಿಯಾಗುತ್ತದೆ, ಆದರೆ ತಿಲಕ, ನಾಮ ಕಂಡರೆ ಆಗುವುದಿಲ್ಲ” ಎಂದು ಲೇವಡಿ ಮಾಡಿರುವ ಅಶೋಕ್, ಇದು ಅವರ ಹಿಂದೂ ವಿರೋಧಿ ನೀತಿಯ ಮುಂದುವರಿದ ಭಾಗ ಎಂದು ಟೀಕಿಸಿದ್ದಾರೆ. ಟಿಪ್ಪು ಜಯಂತಿ ಮತ್ತು ಮುಸ್ಲಿಂ ತುಷ್ಟೀಕರಣದ ರಾಜಕಾರಣವನ್ನು ಪ್ರಸ್ತಾಪಿಸುವ ಮೂಲಕ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಮತ್ತೊಂದೆಡೆ, ನಟ ಹಾಗೂ ರಾಯರ ಪರಮ ಭಕ್ತ ಜಗ್ಗೇಶ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ರಾಯರನ್ನು ಅಪಮಾನ ಮಾಡಿದವರು ಉದ್ದಾರವಾದ ಇತಿಹಾಸವಿಲ್ಲ” ಎಂದು ಎಚ್ಚರಿಸಿರುವ ಅವರು, ಕೋಟ್ಯಂತರ ಭಕ್ತರು ಆರಾಧಿಸುವ ರಾಯರ ಫೋಟೋವನ್ನು ಈ ರೀತಿ ತಿರಸ್ಕರಿಸಿದ ಪ್ರಥಮ ವ್ಯಕ್ತಿಯನ್ನು ತನ್ನ ಬದುಕಿನಲ್ಲಿ ಈಗ ನೋಡುತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಭಕ್ತಿಯಿಂದ ನೀಡಿದ ಪ್ರಸಾದದಂತಿದ್ದ ಫೋಟೋವನ್ನು ಅವಮಾನಿಸಿರುವುದು ಸರಿಯಲ್ಲ ಎಂದು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ.

You may also like

Leave a Comment