114
ಗದಗ: ಜಿಲ್ಲೆಯ ಐತಿಹಾಸಿಕ ತಾಣ ಲಕ್ಕುಂಡಿಯಲ್ಲಿ ಪುರಾತತ್ವ ಇಲಾಖೆ ನಡೆಸುತ್ತಿರುವ ಉತ್ಖನನ ಕಾರ್ಯವು ಐದನೇ ದಿನಕ್ಕೆ ಕಾಲಿಟ್ಟಿದ್ದು, ಪುರಾತನ ಮಡಿಕೆಗಳ ಅವಶೇಷಗಳು ಪತ್ತೆಯಾಗಿವೆ. ಇತ್ತೀಚೆಗಷ್ಟೇ ಹಳೆಯ ಮನೆಯೊಂದರ ಅಡಿಪಾಯ ಅಗೆಯುವಾಗ 466 ಗ್ರಾಂ ಬಂಗಾರದ ಆಭರಣಗಳು ಸಿಕ್ಕ ಬೆನ್ನಲ್ಲೇ ಈ ಉತ್ಖನನ ರಾಜ್ಯದ ಗಮನ ಸೆಳೆದಿದೆ.
ಚಾಲುಕ್ಯರ ಕಾಲದ ಪ್ರಮುಖ ಟಂಕಸಾಲೆಯಾಗಿದ್ದ ಲಕ್ಕುಂಡಿಯ ಮಣ್ಣಿನಡಿಯಲ್ಲಿ ನಿಧಿ ಇರಬಹುದೇ ಎಂಬ ಚರ್ಚೆ ಸಾರ್ವಜನಿಕರಲ್ಲಿ ಶುರುವಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ತಾಮ್ರದ ಶಿವಲಿಂಗ, ಪ್ರಾಚೀನ ಆಯುಧ ಹಾಗೂ ಕೆತ್ತನೆಯ ಗೋಪುರಗಳು ಪತ್ತೆಯಾಗಿದ್ದವು. ಲಕ್ಕುಂಡಿಯು ಹಿಂದೆ ವೈಭವೋಪೇತ ವಾಣಿಜ್ಯ ಕೇಂದ್ರವಾಗಿದ್ದರಿಂದ, ಈಗ ಪತ್ತೆಯಾಗಿರುವ ಪ್ರತಿಯೊಂದು ಮಡಿಕೆಯೂ ಇತಿಹಾಸದ ದಾಖಲೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಲಾಖೆಯು ಪತ್ತೆಯಾದ ವಸ್ತುಗಳನ್ನು ವೈಜ್ಞಾನಿಕ ಪರಿಶೀಲನೆಗೆ ಒಳಪಡಿಸಿದೆ.