ಭಾರತೀಯ ಮೂಲದ ಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು ಡಿಸೆಂಬರ್ 31 ರಂದು ನಾಸಾದಿಂದ ಅಧಿಕೃತವಾಗಿ ನಿವೃತ್ತರಾಗಿದ್ದಾರೆ. ಜೂನ್ 2024ರಲ್ಲಿ ಕೇವಲ ಒಂದು ವಾರದ ಮಿಷನ್‌ಗಾಗಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ತೆರಳಿದ್ದ ಅವರು, ತಾಂತ್ರಿಕ ದೋಷಗಳಿಂದಾಗಿ ಬರೊಬ್ಬರಿ 9 ತಿಂಗಳುಗಳ ಕಾಲ ಅಲ್ಲಿಯೇ ಉಳಿಯಬೇಕಾಯಿತು. ಅಂತಿಮವಾಗಿ ಮಾರ್ಚ್ 19, 2025 ರಂದು ಸ್ಪೇಸ್‌ಎಕ್ಸ್ ನೌಕೆಯ ಮೂಲಕ ಅವರು ಸುರಕ್ಷಿತವಾಗಿ ಭೂಮಿಗೆ ಮರಳಿದರು.
ತಮ್ಮ ವೃತ್ತಿಜೀವನದಲ್ಲಿ 3,000 ಗಂಟೆಗಳಿಗಿಂತ ಹೆಚ್ಚು ಹಾರಾಟದ ಅನುಭವ ಹೊಂದಿರುವ ಸುನೀತಾ, ಬಾಹ್ಯಾಕಾಶದಲ್ಲಿ ಮ್ಯಾರಥಾನ್ ಓಡಿದ ಮೊದಲ ಮಹಿಳೆ ಎಂಬ ದಾಖಲೆ ಬರೆದಿದ್ದಾರೆ. ಭೂಮಿಗೆ ಮರಳಿದ ನಂತರ ಭಾರತಕ್ಕೆ ಭೇಟಿ ನೀಡಿದ ಅವರು, ತಮ್ಮ ಯಶಸ್ಸಿಗಾಗಿ ಪ್ರಾರ್ಥಿಸಿದ ಭಾರತೀಯರಿಗೆ ಧನ್ಯವಾದ ಅರ್ಪಿಸಿದರು. ಅಲ್ಲದೆ, ದಿವಂಗತ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ತಾಯಿಯನ್ನು ಭೇಟಿ ಮಾಡಿ ಗೌರವ ಸಲ್ಲಿಸಿದರು. ಸವಾಲುಗಳ ನಡುವೆಯೂ ಸುನೀತಾ ಅವರ ಈ ಸುದೀರ್ಘ ಪಯಣ ಇತಿಹಾಸದಲ್ಲಿ ಅಪರೂಪದ ಸಾಧನೆಯಾಗಿ ದಾಖಲಾಗಿದೆ.