ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ಮಾನವೀಯತೆ ಮರೆತ ಘಟನೆಯೊಂದು ನಡೆದಿದ್ದು, ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಿದೆ. ಮದುವೆಗೆ ಮುನ್ನ ಗರ್ಭಿಣಿಯಾಗಿದ್ದ 19 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ, ತನ್ನ ಹೆತ್ತವರೊಂದಿಗೆ ಸೇರಿ ಅಕ್ರಮ ಸಂಬಂಧದಿಂದ ಜನಿಸಿದ ಹಸುಗೂಸನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ.
ನಡುರಾತ್ರಿ ಮನೆಯಲ್ಲಿ ಹೆರಿಗೆಯಾದ ತಕ್ಷಣ, “ಕುಟುಂಬದ ಗೌರವ” ಕಾಪಾಡುವ ನೆಪದಲ್ಲಿ ಅಜ್ಜಿಯೇ ಮಗುವಿನ ಕುತ್ತಿಗೆ ಹಿಸುಕಿ ಕೊಂದರೆ, ಹೆತ್ತ ತಾಯಿ ಈ ಕ್ರೌರ್ಯಕ್ಕೆ ಮೂಕಪ್ರೇಕ್ಷಕಿಯಾಗಿದ್ದಳು. ಬಳಿಕ ಮಗುವಿನ ಮೃತದೇಹವನ್ನು ತಿಪ್ಪೆಯ ಗುಂಡಿಯಲ್ಲಿ ಹೂಳಲು ಯತ್ನಿಸುತ್ತಿದ್ದಾಗ, ಅನುಮಾನಗೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಲಕ್ಕವಳ್ಳಿ ಪೊಲೀಸರು ತಪಾಸಣೆ ನಡೆಸಿದಾಗ ಬ್ಯಾಗ್‌ನಲ್ಲಿ ಹಸುಗೂಸಿನ ಶವ ಪತ್ತೆಯಾಗಿದೆ. ಈ ಘೋರ ಕೃತ್ಯದ ಸಂಬಂಧ ತಾಯಿ ಹಾಗೂ ಅಜ್ಜಿಯನ್ನು ಬಂಧಿಸಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕಾಫಿನಾಡಿನ ಈ ಅಮಾನವೀಯ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದ್ದು, ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಜೀವ ಕಳೆದುಕೊಂಡ ಕಂದಮ್ಮನಿಗೆ ನ್ಯಾಯ ಸಿಗಲಿ ಎಂಬ ಕೂಗು ಕೇಳಿಬಂದಿದೆ.