ರಾಜ್ಯದ ರೈತರ ಹಿತದೃಷ್ಟಿಯಿಂದ ಬೇಡಿಕೆಗೆ ತಕ್ಕಂತೆ ರಸಗೊಬ್ಬರ ಪೂರೈಕೆ ಮಾಡಲಾಗುತ್ತಿದ್ದು, ಸದ್ಯ ಯಾವುದೇ ಕೊರತೆಯಿಲ್ಲ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ವಿಧಾನ ಪರಿಷತ್ತಿನಲ್ಲಿ ಸ್ಪಷ್ಟಪಡಿಸಿದ್ದಾರೆ. ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಕೆ. ವಿವೇಕಾನಂದ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 2025ರ ಮೇ ಮತ್ತು ಆಗಸ್ಟ್ ಅವಧಿಯಲ್ಲಿ ಕಂಡುಬಂದಿದ್ದ ಅಲ್ಪ ಪ್ರಮಾಣದ ಅಭಾವವನ್ನು ಈಗ ಯಶಸ್ವಿಯಾಗಿ ನೀಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಚಿವರು ನೀಡಿದ ಅಂಕಿಅಂಶಗಳ ಪ್ರಕಾರ, 2025-26ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿಗೆ ಒಟ್ಟು 18.21 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆಯಿದೆ. ಈ ಪೈಕಿ ಜನವರಿ 27, 2026ರ ವೇಳೆಗೆ ರಾಜ್ಯಕ್ಕೆ 21.89 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಸರಬರಾಜಾಗಿದೆ. ಈಗಾಗಲೇ 11.71 ಲಕ್ಷ ಮೆಟ್ರಿಕ್ ಟನ್ ಮಾರಾಟವಾಗಿದ್ದು, ಇನ್ನೂ 10.18 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನಿದೆ.
ಕೇಂದ್ರ ಸರ್ಕಾರದಿಂದ ನಿರಂತರವಾಗಿ ಪೂರೈಕೆಯಾಗುತ್ತಿರುವುದರಿಂದ ರೈತರು ಆತಂಕಪಡುವ ಅಗತ್ಯವಿಲ್ಲ. ಕೃಷಿ ಚಟುವಟಿಕೆಗಳಿಗೆ ಯಾವುದೇ ಅಡ್ಡಿಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ದಾಸ್ತಾನು ನಿರ್ವಹಿಸಲಾಗುತ್ತಿದೆ ಎಂದು ಸಚಿವರು ಭರವಸೆ ನೀಡಿದರು.