ಫೆ. 28ರಂದು ರಾಜ್ಯದ ಶಾಲೆಗಳಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ: ಏಕಕಾಲದಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರಕ್ಕೆ ಆದೇಶ 
ಫೆಬ್ರವರಿ 28ರಂದು ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಏಕಕಾಲದಲ್ಲಿ ವಿಶೇಷ ಪ್ರತಿಜ್ಞಾ ವಿಧಿ ಸ್ವೀಕರಿಸುವ ಮೂಲಕ ದಿನಾಚರಣೆಯನ್ನು ಆಚರಿಸಲು ಸರ್ಕಾರ ಆದೇಶ ಹೊರಡಿಸಿದೆ.
ಭಾರತೀಯ ಸಂವಿಧಾನದ ವಿಧಿ 51A (h) ಅನ್ವಯ ವೈಜ್ಞಾನಿಕ ಮನೋಭಾವನೆ, ವೈಚಾರಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಮೂಲಭೂತ ಕರ್ತವ್ಯವನ್ನು ವಿದ್ಯಾರ್ಥಿಗಳು ಅರಿತು ಅನುಸರಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ಒಂದೇ ಸಮಯದಲ್ಲಿ ಪ್ರತಿಜ್ಞೆ ಸ್ವೀಕರಿಸುವಂತೆ ಸೂಚಿಸಲಾಗಿದೆ.
ಪ್ರತಿಜ್ಞೆಯಲ್ಲಿ, “ನಾನು ಭಾರತೀಯ ಸಂವಿಧಾನದ 51 A (h) ವಿಧಿಯ ಅನ್ವಯ ವೈಜ್ಞಾನಿಕ ಮನೋಭಾವನೆ ಮತ್ತು ವೈಚಾರಿಕತೆಯನ್ನು ಬೆಳೆಸಿಕೊಳ್ಳುತ್ತೇನೆ. ನಾನು ಪ್ರಶ್ನೆ ಮಾಡದೇ ಯಾವುದೇ ತರ್ಕ ಒಪ್ಪುವುದಿಲ್ಲ ಹಾಗೂ ಸಂವಿಧಾನದ ಮೂಲಭೂತ ಕರ್ತವ್ಯದ ಆಶಯದಂತೆ ಮೌಢ್ಯತೆ ಮತ್ತು ಅಂಧಕಾರವನ್ನು ನಿರ್ಮೂಲನೆ ಮಾಡಿ ಜೀವ ಜಗತ್ತಿಗೆ ಪೂರಕವಾದ ಬದುಕನ್ನು ರೂಪಿಸಿಕೊಳ್ಳುತ್ತೇನೆಂದು ಈ ಮೂಲಕ ರಾಷ್ಟ್ರೀಯ ವಿಜ್ಞಾನ ದಿನದಂದು ಪ್ರತಿಜ್ಞೆ ಮಾಡುತ್ತೇನೆ” ಎಂಬ ಆಶಯ ವ್ಯಕ್ತವಾಗಲಿದೆ.
ಈ ಸಂದರ್ಭದಲ್ಲಿ “ಜೈ ಭಾರತ, ಜೈ ಕರ್ನಾಟಕ, ಜೈ ಸಂವಿಧಾನ, ಜೈ ವಿಜ್ಞಾನ” ಎಂಬ ಘೋಷಣೆಗಳೊಂದಿಗೆ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಲು ಸೂಚಿಸಲಾಗಿದೆ.
ವಿಜ್ಞಾನ ಚಿಂತನೆ, ತರ್ಕಬದ್ಧ ಮನೋಭಾವ ಮತ್ತು ಸಮಾಜಮುಖಿ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ದಿಟ್ಟ ಹೆಜ್ಜೆಯಾಗಿ ಈ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆ ಪರಿಗಣಿಸಿದೆ.